ಪ್ರೀತಿಸಿ ಮದುವೆಯಾದ ಪ್ರೇಮಿಗಳಿಗೆ ಜಾತಿ ಅಡ್ಡಿ – ರಕ್ಷಣೆಗಾಗಿ ಅಂಗಲಾಚುತ್ತಿರುವ ಪ್ರೇಮಿಗಳು
ಶಿವಮೊಗ್ಗ: ಪ್ರೀತಿ ಮಾಡಬಾರದು, ಮಾಡಿದರೆ ಜಗಕೆ ಹೆದರಬಾರದು’ ಹಾಡಿನಂತೆ ಪ್ರೇಮಿಗಳಿಬ್ಬರು ಪ್ರೀತಿ ಮಾಡಿ ಎಲ್ಲರನ್ನೂ ಎದುರಿಸಿ ನಿಂತಿದ್ದಾರೆ, ಇದೀಗ ಈ ಪ್ರೇಮಿಗಳು ಜಾತಿ ಕಾರಣಕ್ಕೆ ಭಯದಲ್ಲೇ ಬದುಕುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಶಿವಮೊಗ್ಗ ನಗರದ ನವುಲೆ ನಿವಾಸಿಗಳಾದ ಲೇಖನ ಹಾಗೂ ಬಸವರಾಜ್ ಕಳೆದ ಎರಡು ವರ್ಷದಿಂದ ಪ್ರೀತಿ ಮಾಡಿದ್ದರು. ಇದೀಗ ಪ್ರೀತಿ ಮಾಡಿದ ಪರಸ್ಪರ ಒಪ್ಪಿಗೆ ಮೇರೆಗೆ ಕಳೆದ ನಾಲ್ಕು ದಿನದ ಹಿಂದೆ ಮದುವೆಯಾಗಿದ್ದಾರೆ. ಇದೀಗ ಹುಡುಗಿ ಮನೆಯವರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ಪ್ರೇಮಿಗಳು ಆರೋಪ ಮಾಡಿದ್ದು ಠಾಣೆ ಮೆಟ್ಟಿಲೇರಿ ನಮಗೆ ರಕ್ಷಣೆ ನೀಡಿ ಎಂದು ವಿನೋಬನಗರದ ಪೊಲೀಸರ ಮೊರೆ ಹೋಗಿದ್ದಾರೆ.
ಇನ್ನು ಈ ಜೋಡಿಗೆ ಯುವಕನ ಕಡೆಯವರು ಒಪ್ಪಿಗೆ ಸೂಚಿಸಿದ್ದು ಯುವಕ ಯುವತಿಯ ಬೆನ್ನಿಗೆ ನಿಂತಿದ್ದಾರೆ. ಆದರೆ ಪ್ರೀತಿ ಮಾಡಿ ಮದುವೆಯಾದ ನವಜೋಡಿ ಭಯದಲ್ಲೇ ಬದುಕಿದ್ದು ಪೊಲೀಸರು ನಮಗೆ ರಕ್ಷಣೆ ನೀಡಬೇಕು, ನಮಗೆ ಏನಾದರು ಆದರೆ ನಮ್ಮ ಮನೆಯವರೇ ಕಾರಣ ಎಂದು ಯುವತಿ ಆರೋಪ ಮಾಡಿದ್ದಾರೆ. ನಾವು ಪರಸ್ಪರ ಪ್ರೀತಿಸಿ ಇದೀಗ ಮದುವೆಯಾಗಿ ಹೊಸ ಜೀವನಕಟ್ಟಿಕೊಂಡಿದ್ದೇವೆ, ನಮಗೆ ಬದುಕಲು ಬಿಡಿ ಎಂದು ನವಜೋಡಿ ಆಗ್ರಹ ಮಾಡಿದೆ.
ಇನ್ನೂ ನಾಲ್ಕು ದಿನಗಳ ಕೆಳಗೆ ಈ ಜೋಡಿ ಹೊಳೆಹೊನ್ನೂರು ಸಮೀಪದಲ್ಲಿ ಮದುವೆಯಾಗಿದೆ. ಆ ಬಳಿಕ ಯುವಕನ ಪೋಷಕರು ಯುವತಿಯನ್ನ ಮನೆ ತುಂಬಿಸಿಕೊಂಡಿದ್ದಾರಂತೆ. ಆದರೆ ಯುವತಿ ಕಡೆಯವರು ಜೀವ ಬೆದರಿಕೆ ಹಾಕಿದ್ದಾರೆ ಎನ್ನುವುದು ಆರೋಪ. ಇನ್ನು ಯುವತಿ ನಾನು ನನ್ನಿಷ್ಟದಂತೆ ಮದುವೆಯಾಗಿದ್ದು, ಆತನ ಜೊತೆಗೆ ಸಂಸಾರ ನಡೆಸ್ತೇನೆ, ದಯವಿಟ್ಟು ಅವಕಾಶ ಮಾಡಿಕೊಡಿ ಎಂದು ಪೋಷಕರ ಬಳಿ ಮನವಿ ಮಾಡಿದ್ದಾಳೆ. ಸದ್ಯ ಪೊಲೀಸರು ಪ್ರಕರಣದ ಪರಿಶೀಲನೆ ನಡೆಸುತ್ತಿದ್ದಾರೆ.