ತೀರ್ಥಹಳ್ಳಿ : ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಸಾರ್ವಜನಿಕರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಆಪತ್ಕಾಲದಲ್ಲಿ ಡಯಲ್ 112 ಹಾಗೂ 100 ಸೇವೆ ಒದಗಿಸಿದೆ.ಆದರೆ ಇಲ್ಲೊಬ್ಬ ಭೂಪ ರಾತ್ರಿ ನಿದ್ದೆ ಬರ್ತಿಲ್ಲಾ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ.
ಹೌದು, ತೀರ್ಥಹಳ್ಳಿ ತಾಲೂಕಿನ ಮಾಳೂರು ಪೊಲೀಸ್ ಠಾಣೆಯ ವ್ಯಾಪ್ತಿಯ ಮಾಳೂರು ಪಟ್ಟಣ ಈ ವಿಚಿತ್ರ ಪ್ರಕರಣಕ್ಕೆ ಸಾಕ್ಷಿಯಾಗಿದೆ. ‘ನಿದ್ದೆ ಬರ್ತಿಲ್ಲಾ ಸಾರ್..’ ಎಂದು ಮಧ್ಯರಾತ್ರಿ ತುರ್ತು ಸೇವೆ 112 ನಂಬರ್‌ಗೆ ಇಂಥದ್ದೊಂದು ಕರೆ ಬಂದಾಗ ಪೊಲೀಸರು ತಲೆ ಚಚ್ಚಿಕೊಳ್ಳುವುದೊಂದೇ ಬಾಕಿ. ನಿದ್ದೆ ಬರ್ದಿದ್ರೆ ನಾವೇನು ಮಾಡಬೇಕಪ್ಪಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಅತ್ತಕಡೆಯಿಂದ ಕರೆ ಮಾಡಿದ ವ್ಯಕ್ತಿ ‘ಸರ್ ನನಗೆ ನಿದ್ರೆ ಬರ್ದಿರೋದಕ್ಕೆ ಕಾರಣ ಇದೆ ಸರ್. ಈ ಸಮಸ್ಯೆಗೆ ಪರಿಹಾರ ಬೇಕು ಎಂದು ಅಳಲು ತೋಡಿಕೊಂಡಿದ್ದಾನೆ. ಅಲ್ಲದೇ ತಾವು ತಕ್ಷಣ ಬಂದರೆ ನಿಮಗೆ ಅರ್ಥ ಆಗುತ್ತೆ ಎಂದು ಒತ್ತಾಯ ಕೂಡ ಮಾಡಿದ್ದಾನೆ.
ಇಷ್ಟಕ್ಕೂ ನಡೆದದ್ದು ಏನೆಂದರೆ ಅಂದು ರಾತ್ರಿ 112 ನಂಬರ್‌ಗೆ ಕರೆ ಮಾಡಿದ ತೀರ್ಥಹಳ್ಳಿ ತಾಲೂಕು ಮಾಳೂರಿನ ಸೈಯದ್ ಮುಬಾರಕ್ ಎಂಬಾತ, ನೆರೆ ಮನೆ ವ್ಯಕ್ತಿಯೊಬ್ಬ ಜೋರು ಗೊರಕೆ ಹೊಡೆಯುತ್ತಿರುವುದರಿಂದ ನಿದ್ದೆ ಬರದೇ ಒದ್ದಾಡಿದ್ದಾನೆ. ನೆರೆ ಮನೆಯವನ ಗೊರಕೆಯಿಂದ ನನಗೆ
ನಿದ್ರಾಭಂಗವಾಗುತ್ತಿದೆ. ಆತನ ಗೊರಕೆ ಸೌಂಡ್ ನಿಲ್ಲಿಸುವಂತೆ 112 ನಂಬರ್‌ಗೆ ಕರೆ ಮಾಡಿದ್ದಾನೆ. ರಾತ್ರಿ ಬೀಟ್‌ನಲ್ಲಿದ್ದ ಎಎಸ್‌ಐ ಕೃಷ್ಣಮೂರ್ತಿಗೆ ಕರೆ ಸ್ವೀಕರಿಸಿ ಮಾತಾಡಿದ್ದಾರೆ.
ಒಂದೇ ಕಟ್ಟಡದ ಮೂರು ಮನೆಗಳ ಪೈಕಿ ಮಧ್ಯದ ಮನೆಯ ವ್ಯಕ್ತಿ ಗೊರಕೆ ಹೊಡೆಯುತ್ತಿದ್ದಾನೆ ಎಂಬುದು ಸೈಯದ್ ಮುಬಾರಕ್ ದೂರಾಗಿತ್ತು. ಮಧ್ಯರಾತ್ರಿಯೇ ಸ್ಥಳಕ್ಕೆ ಹೋಗಿದ್ದ ಎಎಸ್‌ಐ ಅಲ್ಲಿನ ಪರಿಸ್ಥಿತಿ ಗಮನಿಸಿದಾಗ ಯಾವ ಗೊರಕೆ ಶಬ್ದವೂ ಕೇಳಿ ಬಂದಿಲ್ಲ. ದೂರುದಾರನ ದುರಾದೃಷ್ಟ ಏನೋ ಎಂಬಂತೆ ಎಎಸ್‌ಐ ಕೃಷ್ಣಮೂರ್ತಿ ಮನೆಯ ಬಳಿಗೆ ಪರಿಶೀಲನೆಗಾಗಿ ಬಂದಾಗಲೇ ಗೊರಕೆ ಶಬ್ದ ನಿಂತು ಹೋಗಿತ್ತು.
‘ಎಲ್ಲಪ್ಪ ಗೊರಕೆ ಶಬ್ದ’ ಎಂದು ಕಂಪ್ಲೇಂಟ್ ಮಾಡಿದ ವ್ಯಕ್ತಿಗೆ ಏಎಸ್‌ಐ ಕೇಳಿದ್ದಾರೆ. ಅದಕ್ಕೆ ಮುಬಾರಕ್ “ಸರ್ ಇಷ್ಟೊತ್ತು ಗೊರಕೆ ಹೊಡಿತಾ ಇದ್ದ ಸರ್, ನೀವು ಬರ್ತಾ ಇದ್ದ ಹಾಗೆ ನಿಂತುಬಿಟ್ಟಿದೆ ಸಾರ್’ ಎಂದು ಹೇಳಿದ್ದಾನೆ. ಇದರಿಂದ ಕೋಪ ಬಂದ್ರೂ ಕೂಡ ತಾಳ್ಮೆ ತೆಗೆದುಕೊಂಡ ಎಎಸ್‌ಐ ಬೆಳಗ್ಗೆ ಠಾಣೆಗೆ ಬನ್ನಿ ಎಂದು ಸೈಯದ್ ಮುಬಾರಕ್‌ಗೆ ತಿಳಿಸಿ ಅಲ್ಲಿಂದ ಹೊರಟಿದ್ದಾರೆ.
ಮರುದಿನ ಠಾಣೆಗೆ ಬಂದ ಸೈಯದ್ ಮುಬಾರಕ್‌ಗೆ ಕ್ಲಾಸ್ ತೆಗೆದುಕೊಂಡ ಪೊಲೀಸರು, ತುರ್ತು ಸೇವೆಯನ್ನು ದುರ್ಬಳಕೆ ಮಾಡಿಕೊಂಡಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಮುಂದೆ ಇದೇ ರೀತಿ ಕಿರಿಕಿರಿ ಮಾಡಿದರೆ ಜೋಕೆ. ಗೊರಕೆ ಹೊಡೆಯೋದನ್ನ ನಿಲ್ಲಿಸುವುದಕ್ಕೆ ಪೊಲೀಸರು ಇರೋದಾ? ಗೊರಕೆ ಹೊಡೆಯುವನ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಇಲ್ಲವೇ ಮನೆ ಮಾಲೀಕನಿಗೆ ತಿಳಿಸಿ ಸಮಸ್ಯೆ ಬರಗೆರಿಸಿಕೊಳ್ಳಬೇಕು. ಇಂಥದ್ದಕ್ಕೆಲ್ಲ ಪೊಲೀಸ್ ಗೆ ಕರೆಮಾಡಿ ತೊಂದರೆ ಕೊಟ್ಟರೆ ಅಷ್ಟೇ ಎಂದು ಎಚ್ಚರಿಕೆ ನೀಡಿದ್ದಾರೆ.
ಅಲ್ಲಿಗೆ ಗೊರಕೆಯ ಸ್ವಾರಸ್ಯಕರ ಪ್ರಕರಣಕ್ಕೆ ಬುದ್ಧಿ ಮಾತು ಹೇಳಿ ಅಂತ್ಯ ಹಾಡಿದ್ದಾರೆ.