ಕಾಡುಕೋಣಗಳ ಮಾರಣಹೋಮ ಪ್ರಕರಣ – ಘಟನೆ ಕುರಿತು ವರದಿ ಕೇಳಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ | Postman news impact
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ವ್ಯಾಪ್ತಿಯ ನಾಗರಹಳ್ಳಿ ಗ್ರಾಮದಲ್ಲಿ ನಡೆದಿದ್ದ ಕಾಡು ಕೋಣಗಳ ಮಾರಣಹೋಮ ಪ್ರಕರಣದ ಬಗ್ಗೆ ರಾಜ್ಯ ಅರಣ್ಯ ಸಚಿವ ಬಿ ಈಶ್ವರ್ ಖಂಡ್ರೆ ವರದಿ ಕೇಳಿದ್ದಾರೆ.
ಹುಂಚ ವ್ಯಾಪ್ತಿಯ ನಾಗರಹಳ್ಳಿ ವ್ಯಾಪ್ತಿಯಲ್ಲಿ ಕೆಲವು ಕಿಡಿಗೇಡಿಗಳು ನಾಲ್ಕಕ್ಕೂ ಹೆಚ್ಚು ಕಾಡುಕೋಣಗಳನ್ನು ಅಕ್ರಮ ಬಂದೂಕು ಬಳಸಿ ಹತ್ಯೆಗೈದಿರುವ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ತಂಡ ಪ್ರಕರಣ ನಡೆದಿರುವ ಸ್ಥಳಕ್ಕೆ ತೆರಳಿ ಅರಣ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಂಕ್ಷಿಪ್ತ ವರದಿ ಪ್ರಸಾರ ಮಾಡಲಾಗಿತ್ತು.
ಈ ಹಿನ್ನಲೆಯಲ್ಲಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರಕರಣ ನಡೆದಿರುವ ಸ್ಥಳಗಳಲ್ಲಿ ಕಳ್ಳಬೇಟೆ ತಡೆ ಶಿಬಿರಗಳಿದ್ದರೂ ಇಂತಹ ಪ್ರಕರಣ ನಡೆಯುತ್ತಿರುವುದ ಆತಂಕದ ಸಂಗತಿಯಾಗಿದ್ದು ಈ ಕೂಡಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ವರದಿಯನ್ನು 25-06-2024 ರೊಳಗೆ ಸಲ್ಲಿಸುವಂತೆ ಹಾಗೂ ಸದರಿ ಸ್ಥಳಗಳಲ್ಲಿ ಗಸ್ತು ಹೆಚ್ಚಿಸುವಂತೆ ಸೂಚಿಸಿದ್ದಾರೆ.
ಘಟನೆಯ ಹಿನ್ನಲೆ :
ಹುಂಚ ಭಾಗದಲ್ಲಿ ಹತ್ತಕ್ಕೂ ಹೆಚ್ಚು ಕಾಡುಕೋಣಗಳು ಆಗಾಗ ಪ್ರತ್ಯಕ್ಷಗೊಳ್ಳುತಿದ್ದವು ಆದರೆ ಈಗ ಗುಂಪಿನಲ್ಲಿ ನಾಲ್ಕೈದು ಮಾತ್ರ ಇದೆ ಕಾಡುಕೋಣಗಳ ಮಾರಣಹೋಮವೇ ನಡೆದಿದೆ , ಪ್ರಕರಣ ಮುಚ್ಚಿ ಹಾಕಲು ಪ್ರಯತ್ನ ನಡೆಯುತ್ತಿದೆ ಎಂಬ ಗುಸುಗುಸು ನಾಗರಹಳ್ಳಿ ಭಾಗದಲ್ಲು ಆರಂಭವಾಗಿತ್ತು.
ಈ ಬಗ್ಗೆ ಮಾಹಿತಿ ತಿಳಿದ ಪೋಸ್ಟ್ ಮ್ಯಾನ್ ನ್ಯೂಸ್ ನ ಸಂಪಾದಕ ರಫ಼ಿ ರಿಪ್ಪನ್‌ಪೇಟೆ ಹಾಗೂ ತಂಡ ಸ್ಥಳಕ್ಕೆ ತೆರಳಿ ಕಾಡು ಪ್ರದೇಶಗಳಲ್ಲಿ ಹುಡುಕಾಟ ನಡೆಸಿದಾಗ ಕಾಡುಕೋಣದ ಕಳೇಬರಗಳು ದೊರಕಿ ಕಾಡುಕೋಣಗಳ ಮಾರಣಹೋಮ ನಡೆದಿರುವುದು ಖಚಿತವಾದ ಹಿನ್ನಲೆಯಲ್ಲಿ ಈ ಬಗ್ಗೆ ಅರಣ್ಯ ಇಲಾಖೆಯ ಡಿಸಿಎಫ಼್ ಸಂತೋಷ್ ಕೆಂಚಪ್ಪಣ್ಣನವರ್ , RFO ರಾಘವೇಂದ್ರ ರವರಿಗೆ ಮಾಹಿತಿ ತಿಳಿಸಲಾಗಿತ್ತು.
ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿ ಸಂತೋಷ್ ಕೆಂಚಣ್ಣನವರ್ ಹಾಗೂ Rfo ರಾಘವೇಂದ್ರ ಸ್ಥಳ ಪರಿಶೀಲನೆ ನಡೆಸಿ ಕಾಡುಕೋಣದ ಕಳೇಬರಗಳನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದರು. ನಂತರದಲ್ಲಿ ಇನ್ನೂ ಹಲವು ಕಾಡುಕೋಣಗಳ ಕಳೇಬರಕ್ಕೆ ಹುಡುಕಾಟ ನಡೆಸಲಾಗಿತ್ತು.
ಆರೋಪಿಗಳು ಕಾಡುಕೋಣಗಳನ್ನು ಮಾಂಸಕ್ಕಾಗಿಯೋ ಅಥವಾ ಬೆಳೆ ನಾಶ ಪಡಿಸಿದ್ದಕ್ಕಾಗಿ ಹತ್ಯೆ ಮಾಡಿದ್ದಾರಾ ಎನ್ನುವುದು ತನಿಖೆಯಲ್ಲಿ ತಿಳಿದುಬರಬೇಕಾಗಿದೆ. ಕಾಡು ಕೋಣಗಳ ಹತ್ಯೆಗೆ ಕಳ್ಳಕೋವಿಗಳನ್ನು ಬಳಸಿದ್ದಾರೆ ಎಂಬ ಆರೋಪವು ಕೇಳಿಬಂದಿತ್ತು.
ಸಂರಕ್ಷಿತ ಅಭಯಾರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಬೇಟೆಗಾರರು ಈಗಲೂ ಸಕ್ರಿಯವಾಗಿದ್ದಾರೆ ಎಂಬುದು ಪದೇ ಪದೇ ಸ್ವಷ್ಟವಾಗುತ್ತಿದೆ. ಆದರೆ, ಇದರ ಬಗ್ಗೆ ಕಠಿಣ ನಿಲುವು ತೋರಲು ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.
ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ಈ ಪ್ರಕರಣ ಲೋಕಸಭಾ ಚುನಾವಣೆಯ ಪ್ರಾರಂಭವಾದಗಿನಿಂದ ನಡೆಯುತಿದ್ದು ತಮ್ಮ ಪ್ರಭಾವದ ಮೂಲಕ ಮುಚ್ಚಿಹಾಕುವ ಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.ಸುಮಾರು ನಾಲ್ಕಕ್ಕೂ ಹೆಚ್ಚು ಕಾಡುಕೋಣಗಳನ್ನು ಹತ್ಯೆಗೈಯಲಾಗಿದೆ.
ಈಗ ಪ್ರಕರಣ ಅರಣ್ಯ ಸಚಿವರ ಗಮನಕ್ಕೆ ಬಂದಿದ್ದು ಪ್ರಕರಣದ ತನಿಖೆ ತೀವ್ರಗೊಳ್ಳುವ ಲಕ್ಷಣಗಳು ಕಂಡುಬಂದಿದೆ.