ಅಧಿಕಾರದ ದಾಹಕ್ಕಾಗಿ ದಲಿತರು ಹಾಗೂ ಹಿಂದುಳಿದ ವರ್ಗಗಳ ಮೀಸಲಾತಿ ಬದಲಾವಣೆ: ಕಲಗೋಡು ರತ್ನಾಕರ್ ವಿರುದ್ಧ ಜಿಪಂ ಮಾಜಿ ಸದಸ್ಯೆ ಎ.ಟಿ. ನಾಗರತ್ನಮ್ಮ ಆಕ್ರೋಶ | Former ZP member A.T. Nagarathnamma slams senior leader Kalagodu Rathnakar over changing Dalit and OBC reservation lists in Ripponpet and Kenchanala constituencies, warning of legal action and electoral backlash.
ರಿಪ್ಪನ್‌ಪೇಟೆ: ಅಧಿಕಾರದ ಆಸೆಗಾಗಿ ದಲಿತರು ಹಾಗೂ ಅತಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಬದಲಾಯಿಸುವ ಮೂಲಕ ಹಿರಿಯ ನಾಯಕ ಕಲಗೋಡು ರತ್ನಾಕರ್ ರಾಜಕೀಯ ಸಣ್ಣತನ ಪ್ರದರ್ಶಿಸಿದ್ದಾರೆ. ಅವರಿಗೆ ಸಮುದಾಯವು ತಕ್ಕ ಉತ್ತರ ನೀಡುವ ಕಾಲ ಸನ್ನಿಹಿತವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಎ.ಟಿ. ನಾಗರತ್ನಮ್ಮ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಿ.ಆರ್. ಶೆಟ್ಟಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸದಾ ಹಿಂದುಳಿದ ವರ್ಗ ಹಾಗೂ ದಲಿತರ ಏಳಿಗೆಯ ಬಗ್ಗೆ ಭಾಷಣ ಮಾಡುವ ಕಲಗೋಡು ರತ್ನಾಕರ್, ತಮ್ಮ ಸ್ವಾರ್ಥಕ್ಕಾಗಿ ಆ ಸಮುದಾಯಗಳಿಗೆ ಅನ್ಯಾಯವೆಸಗಿದ್ದಾರೆ ಎಂದು ಆರೋಪಿಸಿದರು.
“ರಿಪ್ಪನ್‌ಪೇಟೆ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಕರಡು ಮೀಸಲಾತಿ ಪಟ್ಟಿಯಲ್ಲಿ ದಲಿತರಿಗೆ ಮೀಸಲಾತಿ ನಿಗದಿಯಾಗಿತ್ತು. ತಾಲೂಕಿನಲ್ಲಿಯೇ ಅತಿ ಹೆಚ್ಚು ದಲಿತ ಮತದಾರರಿರುವ ಈ ಕ್ಷೇತ್ರದ ಮೀಸಲಾತಿಯನ್ನು ಅಧಿಕಾರದ ದಾಹಕ್ಕಾಗಿ ಬದಲಾಯಿಸಲಾಗಿದೆ. ಅದೇ ರೀತಿ, ಕೆಂಚನಾಳ ತಾಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಸಾಮಾನ್ಯ (General) ಮೀಸಲಾತಿ ಇತ್ತು. ಅಲ್ಲಿ ಅತಿ ಹಿಂದುಳಿದ ವರ್ಗವಾದ ಗಂಗಾಮತಸ್ಥ ಸಮಾಜದವರು ಸ್ಪರ್ಧಿಸಿ ರಾಜಕೀಯವಾಗಿ ಬೆಳೆಯುವ ಉತ್ತಮ ಅವಕಾಶವಿತ್ತು. ಆದರೆ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಅದನ್ನು ‘ಬಿಸಿಎಂ-ಬಿ’ (BCM-B) ಕೆಟಗರಿಗೆ ಬದಲಾಯಿಸಿದ್ದಾರೆ,” ಎಂದು ನಾಗರತ್ನಮ್ಮ ಕಿಡಿಕಾರಿದರು.
ದಲಿತರು ಹೆಚ್ಚಿರುವ ರಿಪ್ಪನ್‌ಪೇಟೆ ಕ್ಷೇತ್ರದ ಮೀಸಲಾತಿ ಬದಲಾವಣೆಯನ್ನು ಖಂಡಿಸಿರುವ ಅವರು, ಪಕ್ಷದ ಹಿರಿಯರು ಹಾಗೂ ಮುಖಂಡರೊಂದಿಗೆ ಚರ್ಚಿಸಿ ಈ ಅನ್ಯಾಯದ ವಿರುದ್ಧ ಕಾನೂನು ಮೊರೆ ಹೋಗುವುದಾಗಿ ಎಚ್ಚರಿಕೆ ನೀಡಿದರು.
ಚುನಾವಣೆಯಲ್ಲಿ ತಕ್ಕ ಉತ್ತರ – ಗಣಪತಿ ಬಿ.ಕೆ.:
ಇದೇ ವೇಳೆ ಮಾತನಾಡಿದ ಹೊಸನಗರ ತಾಲೂಕು ಗಂಗಾಮತಸ್ಥರ ಸಮಾಜದ ಉಪಾಧ್ಯಕ್ಷ ಗಣಪತಿ ಬಿ.ಕೆ. ಬಾಳೂರು, “ಕೆಂಚನಾಳ ತಾಪಂ ವ್ಯಾಪ್ತಿಯಲ್ಲಿ ನಮ್ಮ ಸಮಾಜದ 1,600ಕ್ಕೂ ಹೆಚ್ಚು ಮತಗಳಿವೆ. ಸಮಾಜದ ರಾಜಕೀಯ ಏಳಿಗೆಗೆ ಪೂರಕವಾಗಿದ್ದ ಸಾಮಾನ್ಯ ಮೀಸಲಾತಿಯನ್ನು ಕಲಗೋಡು ರತ್ನಾಕರ್ ಬದಲಾಯಿಸುವ ಮೂಲಕ ನಮ್ಮ ಬಂಧುಗಳ ಆಸೆಗೆ ತಣ್ಣೀರೆರಚಿದ್ದಾರೆ. ಈ ವಿಚಾರವನ್ನು ಸಮಾಜದ ಪ್ರತಿಯೊಬ್ಬರಿಗೂ ತಲುಪಿಸಿ, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತೇವೆ,” ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಆರ್.ಟಿ. ಗೋಪಾಲ್, ದಲಿತ ಸಂಘದ ತಾಲೂಕು ಅಧ್ಯಕ್ಷ ರಾಘವೇಂದ್ರ ಚಿಪ್ಲಿ, ಪರಮೇಶ್ ಕೆಂಚನಾಳ, ತಾಪಂ ಮಾಜಿ ಸದಸ್ಯೆ ಸರಸ್ವತಮ್ಮ, ಅರುಣ್ ಗೌಡಕೊಪ್ಪ, ನಾಗೇಶ್ ಚಂದಳ್ಳಿ, ಗಣಪತಿ, ಕಾಂತಣ್ಣ, ವಿನಯ್, ಮಧು, ಸಂತೋಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
