ರಿಪ್ಪನ್ಪೇಟೆ | ಲಾರಿಯನ್ನು ಓವರ್ಟೇಕ್ ಮಾಡುವ ಭರದಲ್ಲಿ ಮಹಿಳೆಗೆ ಬಸ್ ಡಿಕ್ಕಿ; ತಲೆಗೆ ಗಂಭೀರ ಗಾಯ | A woman sustained serious head injuries after a Rajalakshmi private bus hit her while overtaking a lorry near Good Shepherd Church in Ripponpete. She was shifted to Shivamogga Meggan Hospital.
ರಿಪ್ಪನ್ಪೇಟೆ: ಲಾರಿಯನ್ನು ಓವರ್ಟೇಕ್ ಮಾಡುವ ಭರದಲ್ಲಿ ಖಾಸಗಿ ಬಸ್ವೊಂದು ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ರಿಪ್ಪನ್ಪೇಟೆಯ ಗುಡ್ ಶೆಫರ್ಡ್ ಚರ್ಚ್ ಸಮೀಪ ನಡೆದಿದೆ.
ಗಾಯಗೊಂಡ ಮಹಿಳೆಯನ್ನು ಇಂದಿರಾ ಕೋ ಆನಂದ್ ಎಂದು ಗುರುತಿಸಲಾಗಿದೆ.
ತೀರ್ಥಹಳ್ಳಿ ಕಡೆಯಿಂದ ಸಾಗರದತ್ತ ತೆರಳುತ್ತಿದ್ದ ರಾಜಲಕ್ಷ್ಮಿ ಖಾಸಗಿ ಬಸ್, ಗುಡ್ ಶೆಫರ್ಡ್ ಚರ್ಚ್ ಸಮೀಪ ಲಾರಿಯನ್ನು ಓವರ್ಟೇಕ್ ಮಾಡಲು ಮುಂದಾದ ಸಂದರ್ಭದಲ್ಲಿ ಮಹಿಳೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿವೆ.
ತಕ್ಷಣವೇ ಗಾಯಾಳುವನ್ನು ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಘಟನೆ ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಖಾಸಗಿ ಬಸ್ಗಳ ಅತಿವೇಗಕ್ಕೆ ಕಡಿವಾಣ ಹಾಕಲು ಸಾರ್ವಜನಿಕರ ಒತ್ತಾಯ
ರಿಪ್ಪನ್ಪೇಟೆ ವ್ಯಾಪ್ತಿಯಲ್ಲಿ ಖಾಸಗಿ ಬಸ್ಗಳ ಅತಿವೇಗದ ಚಾಲನೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ಪಟ್ಟಣದ ನಗರ ವ್ಯಾಪ್ತಿಯಲ್ಲಿ ಸಂಚರಿಸುವಾಗಲೂ ಕೆಲವು ಖಾಸಗಿ ಬಸ್ಗಳು ಮಿತಿ ಮೀರಿದ ವೇಗದಲ್ಲಿ ಚಲಿಸುತ್ತಿದ್ದು, ಇದರಿಂದ ಅಪಘಾತಗಳ ಅಪಾಯ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂರದ ಊರುಗಳಿಂದ ಸಂಚರಿಸುವ ಬಸ್ಗಳು ರಿಪ್ಪನ್ಪೇಟೆ ಪಟ್ಟಣದ ಸಮೀಪ ಬರುತ್ತಿದ್ದಂತೆ ವೇಗ ಹೆಚ್ಚಿಸಿಕೊಂಡು, ಓವರ್ಟೇಕ್ ಮಾಡುವ ಭರದಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ಕಡೆಗಣಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಇಂತಹ ಅಜಾಗರೂಕ ಚಾಲನೆಯಿಂದ ಅಮಾಯಕ ಸಾರ್ವಜನಿಕರು ಅಪಘಾತಗಳಿಗೆ ಬಲಿಯಾಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಂಬಂಧಪಟ್ಟ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಖಾಸಗಿ ಬಸ್ಗಳ ವೇಗದ ಮೇಲೆ ನಿಗಾ ವಹಿಸಿ, ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
