ಬಡವರ ಪರ ಭಾಷಣ ಮಾಡುವವರೇ ರೈತರ ತೋಟ ತೆರವುಗೊಳಿಸಿದ್ದು ಎಷ್ಟು ಸರಿ? – ಹರತಾಳು ಹಾಲಪ್ಪ ಪ್ರಶ್ನೆ | BJP state vice president Haratalu Halappa indirectly criticizes Education Minister Madhu Bangarappa over the removal of an areca nut plantation belonging to a Congress worker in Soraba taluk.
ಸೊರಬ: ಬಡವರು, ಹಿಂದುಳಿದವರು ಹಾಗೂ ದೀನದಲಿತರ ಪರವಾಗಿ ಸದಾ ಮಾತನಾಡುವ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಸಾಮಾಜಿಕ ಜಾಲತಾಣದ ಮೂಲಕ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೊರಬ ತಾಲೂಕು ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆವರ ತೆಪ್ಪ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತ ದೇವರಾಜ್ (ತಂದೆ ಮಂಜಪ್ಪ) ಅವರಿಗೆ ಸೇರಿದ ತಗಡಿನ ಮನೆಯ ತೋಟವನ್ನು ತೆರವುಗೊಳಿಸಿರುವ ವಿಚಾರ ಇದೀಗ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಈ ಸಂಬಂಧ ಹರತಾಳು ಹಾಲಪ್ಪ ಅವರು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಸಚಿವ ಮಧು ಬಂಗಾರಪ್ಪ ಅವರ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ, ಶಿಕ್ಷಣ ಸಚಿವರನ್ನು ಉದ್ದೇಶಿಸಿ ಅಸಮಾಧಾನ ವ್ಯಕ್ತಪಡಿಸಿರುವುದು ಕಂಡುಬಂದಿದೆ.
“ಸದಾ ಬಡವರ ಪರ, ಹಿಂದುಳಿದವರ ಪರ ಹಾಗೂ ದೀನದಲಿತರ ಪರವಾಗಿ ಭಾಷಣ ಮಾಡುವ ಸಚಿವರೇ, ಇದೇನಾ ನಿಮ್ಮ ಬಡವರ ಕಾಳಜಿ? ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಮಾತನಾಡುವವರು, ಹೋರಾಟ ಮಾಡುವವರು ರೈತನ ಆದಾಯದ ಮೂಲವಾಗಿರುವ ಅಡಿಕೆ ತೋಟವನ್ನು ತೆರವುಗೊಳಿಸಿರುವುದು ಎಷ್ಟು ಸರಿ?” ಎಂದು ಪ್ರಶ್ನಿಸಿದ್ದಾರೆ.
ಇಂತಹ ಘಟನೆಗಳು ದುರದೃಷ್ಟಕರ ಎಂದು ಅಭಿಪ್ರಾಯಪಟ್ಟಿರುವ ಅವರು, ರೈತರೆಲ್ಲರೂ ಒಗ್ಗಟ್ಟಾಗಿ ನ್ಯಾಯಕ್ಕಾಗಿ ಹೋರಾಟ ನಡೆಸಬೇಕು ಎಂದು ಕರೆ ನೀಡಿದ್ದಾರೆ.
ನ್ಯಾಯಾಲಯದ ಮೂಲಕ ಕಾನೂನು ಹೋರಾಟ ನಡೆಸುವುದರ ಜತೆಗೆ, ಜನಪರ ಹಾಗೂ ಮಾನವೀಯ ನೆಲೆಯಲ್ಲಿ ಪ್ರಕರಣವನ್ನು ಮರುಪರಿಶೀಲಿಸುವಂತೆ ಸಂಬಂಧಪಟ್ಟವರನ್ನು ಒತ್ತಾಯಿಸಬೇಕು. ಅಂತಿಮವಾಗಿ ಕಾನೂನಿನ ಚೌಕಟ್ಟಿನಲ್ಲಿಯೇ ಹೋರಾಟ ನಡೆಸುವುದು ಅನಿವಾರ್ಯ ಎಂದು ಹೇಳಿದ್ದಾರೆ.
ಇನ್ನು ತೋಟ ತೆರವುಗೊಳಿಸಿರುವ ಕ್ರಮದ ಕುರಿತು ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಈ ಪ್ರಕರಣ ಇದೀಗ ಸ್ಥಳೀಯ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.
