ರಿಪ್ಪನ್ಪೇಟೆ ರೋಟರಿ ಕ್ಲಬ್ನಿಂದ ಮಾದರಿ ಕಾರ್ಯ: ಬಡ ವೃದ್ಧನ ಮನೆ ನವೀಕರಿಸಿ ಹಸ್ತಾಂತರ! | Ripponpet Rotary Club restores and paints the dilapidated house of 85-year-old Srinivas in Baruve village, offering a safe home and new hope to the underprivileged family under its community service initiative.
ರಿಪ್ಪನ್ಪೇಟೆ: ಸಮಾಜ ಸೇವೆಯನ್ನೇ ಉಸಿರಾಗಿಸಿಕೊಂಡಿರುವ ರಿಪ್ಪನ್ಪೇಟೆ ರೋಟರಿ ಕ್ಲಬ್, ಇದೀಗ ಮತ್ತೊಂದು ಹೃದಯಸ್ಪರ್ಶಿ ಹಾಗೂ ಮಾದರಿ ಕಾರ್ಯದ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಬೀಳುವ ಸ್ಥಿತಿಯಲ್ಲಿದ್ದ ಬಡ ವೃದ್ಧರೊಬ್ಬರ ಮನೆಯನ್ನು ಸಂಪೂರ್ಣವಾಗಿ ದುರಸ್ತಿಗೊಳಿಸಿ, ಬಣ್ಣ ಬಳಿದು ಸುಸಜ್ಜಿತಗೊಳಿಸುವ ಮೂಲಕ ನೊಂದ ಕುಟುಂಬಕ್ಕೆ ನೆಮ್ಮದಿಯ ಸೂರು ಕಲ್ಪಿಸಿಕೊಟ್ಟಿದೆ.
ಪಟ್ಟಣದ ಸಮೀಪದ ಬರುವೆ ಗ್ರಾಮದ 85 ವರ್ಷದ ವೃದ್ಧ ಶ್ರೀನಿವಾಸ್ ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳು ಹಾಗೂ ಮೊಮ್ಮಕ್ಕಳೊಂದಿಗೆ ತೀವ್ರ ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ಇವರು ವಾಸವಿದ್ದ ಮನೆಯು ಸಂಪೂರ್ಣ ಶಿಥಿಲಗೊಂಡು ಕುಸಿದು ಬೀಳುವ ಆತಂಕದಲ್ಲಿತ್ತು. ಆರ್ಥಿಕವಾಗಿ ತೀರಾ ಹಿಂದುಳಿದಿದ್ದ ಈ ಕುಟುಂಬದ ದಯನೀಯ ಸ್ಥಿತಿಯನ್ನು ಮನಗಂಡ ರಿಪ್ಪನ್ಪೇಟೆ ರೋಟರಿ ಕ್ಲಬ್ ಪದಾಧಿಕಾರಿಗಳು, ತಮ್ಮ ‘ಸಮುದಾಯ ಸೇವಾ ಕಾರ್ಯ’ ಅಭಿಯಾನದಡಿ ಮನೆ ದುರಸ್ತಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು.
ಕಳೆದ ಕೆಲವು ದಿನಗಳಿಂದ ನಿರಂತರವಾಗಿ ನಡೆದ ಮನೆ ನವೀಕರಣ ಹಾಗೂ ಪೇಂಟಿಂಗ್ ಕಾಮಗಾರಿ ಇದೀಗ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಸರಳ ಹಾಗೂ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ವೃದ್ಧ ಶ್ರೀನಿವಾಸ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ, ನವೀಕರಣಗೊಂಡ ಮನೆಯನ್ನು ಅಧಿಕೃತವಾಗಿ ಹಸ್ತಾಂತರಿಸಲಾಯಿತು. ರೋಟರಿ ಸಂಸ್ಥೆಯ ಈ ಕಾಳಜಿಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕ ವಲಯದಿಂದ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಂ.ಬಿ. ಲಕ್ಷ್ಮಣಗೌಡ ಅವರು, “ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ನಿರಂತರ ಸೇವೆಯ ಮೂಲಕ ಜನಮಾನಸಕ್ಕೆ ಹತ್ತಿರವಾಗಿರುವ ರೋಟರಿ ಸಂಸ್ಥೆಯು, ಕಳೆದ 114 ವರ್ಷಗಳಿಂದ ಜಾಗತಿಕ ಮಟ್ಟದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಬಂದಿದೆ. ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿ, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಜನಮುಖಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿರುವ ಇಂತಹ ವಿಶ್ವದರ್ಜೆಯ ಸಂಘಟನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನಮ್ಮೆಲ್ಲರ ಸೌಭಾಗ್ಯ. ನಾವು ಬದುಕುವುದರ ಜೊತೆಗೆ ಸಮಾಜಕ್ಕಾಗಿ ಮಿಡಿಯಲು ರೋಟರಿ ಒಂದು ಶ್ರೇಷ್ಠ ವೇದಿಕೆಯಾಗಿದ್ದು, ಶ್ರೀನಿವಾಸ್ ಅವರಂತಹ ಅಸಹಾಯಕ ಜೀವಗಳಿಗೆ ನೆರವಾಗುವುದು ಮನಸ್ಸಿಗೆ ಅತ್ಯಂತ ಆತ್ಮತೃಪ್ತಿ ನೀಡುತ್ತದೆ,” ಎಂದು ಹರ್ಷ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಅಧ್ಯಕ್ಷ ರವೀಂದ್ರ ಬಲ್ಲಾಳ್ ಮಾತನಾಡಿ, “ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೇವೆ ತಲುಪಿಸಬೇಕು ಎಂಬುದೇ ರೋಟರಿ ಕ್ಲಬ್ನ ಮೂಲ ಧ್ಯೇಯವಾಗಿದೆ. ಬಡವರ ಹಾಗೂ ನೊಂದವರ ಕಣ್ಣೀರು ಒರೆಸುವ ಇಂತಹ ಸಾರ್ಥಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ನಮಗೆಲ್ಲರಿಗೂ ನಿಜವಾದ ಖುಷಿ ಕೊಡುತ್ತದೆ.
ಮಳೆಯಲ್ಲೂ, ಚಳಿಯಲ್ಲೂ ಆತಂಕದಲ್ಲೇ ದಿನ ದೂಡುತ್ತಿದ್ದ ಶ್ರೀನಿವಾಸ್ ಅವರ ಕುಟುಂಬ ಇಂದು ಸುರಕ್ಷಿತ ಸೂರಿನಡಿ ನಗುತ್ತಿರುವುದನ್ನು ನೋಡುವುದೇ ನಮಗೆ ಸಿಕ್ಕ ದೊಡ್ಡ ಪುಣ್ಯ. ಈ ಪುಣ್ಯದ ಕೆಲಸಕ್ಕೆ ಕೈಜೋಡಿಸಿದ ಹಾಗೂ ಸಹಕರಿಸಿದ ಎಲ್ಲಾ ರೋಟರಿ ಸದಸ್ಯರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಮುಂದಿನ ದಿನಗಳಲ್ಲೂ ನಮ್ಮ ಕ್ಲಬ್ ವತಿಯಿಂದ ಇಂತಹ ಇನ್ನಷ್ಟು ಜನಪರ ಕಾರ್ಯಗಳನ್ನು ನಿರಂತರವಾಗಿ ಹಮ್ಮಿಕೊಳ್ಳಲಾಗುವುದು,” ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ನ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಬ್ಬಾರ್ ,ಎಂಬಿ ಮಂಜುನಾಥ್ , ತಾನಾರಾಮ್ , ಕೃಷ್ಣರಾಜು ಎ.ಎಂ.,ರಾಮಚಂದ್ರ ಎಂ. ಅಮಿತಾ ಬಲ್ಲಾಳ್ , ಮುಖೇಶ್, ಡಾಕಪ್ಪ ಮುಡುಬಾ ಹಾಗೂ ಹುಗುಡಿ ವರ್ತೇಶ್ ರೋಟರಿ ಕ್ಲಬ್ನ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದು, ರೋಟರಿ ಕ್ಲಬ್ನ ಈ ಮಾನವೀಯ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
