ಕಂದಕಕ್ಕೆ ಬಿದ್ದ ಲಾರಿ, ಕ್ಯಾಬಿನ್ನಲ್ಲಿ ಸಿಲುಕಿದ ಚಾಲಕ: ಸ್ಥಳೀಯರಿಂದ ಯಶಸ್ವಿ ರಕ್ಷಣಾ ಕಾರ್ಯಾಚರಣೆ | A lorry fell into a 150-foot gorge at Agumbe Ghat. The driver was trapped inside for nearly three hours before being rescued by locals.
ಆಗುಂಬೆ: ಆಗುಂಬೆ ಘಾಟಿಯ ಎರಡನೇ ತಿರುವಿನಲ್ಲಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 150 ಅಡಿ ಆಳದ ಕಂದಕಕ್ಕೆ ಉರುಳಿದ ಘಟನೆ ನಡೆದಿದೆ.
ಅಪಘಾತದಲ್ಲಿ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಸುಮಾರು ಮೂರು ಗಂಟೆಗಳ ಕಾಲ ಲಾರಿಯೊಳಗೆ ಸಿಲುಕಿಕೊಂಡಿದ್ದ ಅವರನ್ನು ಸ್ಥಳೀಯರ ಕಾರ್ಯಾಚರಣೆ ಮೂಲಕ ರಕ್ಷಿಸಲಾಗಿದೆ.
ಶಿವಮೊಗ್ಗದಿಂದ ಉಡುಪಿಗೆ ಬಾಳೆಕಾಯಿ ಸಾಗಿಸುತ್ತಿದ್ದ ಲಾರಿಯಲ್ಲಿ ಚಾಲಕ ಗುಡ್ಡಪ್ಪ ಮಡಿವಾಳ ಹಾಗೂ ಕ್ಲೀನರ್ ರವಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ರಾತ್ರಿ ಸುಮಾರು 12 ಗಂಟೆ ವೇಳೆಗೆ ಆಗುಂಬೆ ಘಾಟಿಯ ಎರಡನೇ ತಿರುವಿನಲ್ಲಿ ಲಾರಿ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ.
ಅಪಘಾತದ ವೇಳೆ ಕ್ಲೀನರ್ ರವಿ ಲಾರಿಯಿಂದ ಹೊರಗೆ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಅವರು ಅಪಘಾತದ ಕುರಿತು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ಲಾರಿಯ ಕ್ಯಾಬಿನ್ ನಜ್ಜುಗುಜ್ಜಾಗಿದ್ದರಿಂದ ಚಾಲಕ ಗುಡ್ಡಪ್ಪ ಮಡಿವಾಳ ಅವರು ಒಳಗೆ ಸಿಲುಕಿಕೊಂಡಿದ್ದರು.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಚಾಲಕನನ್ನು ಲಾರಿಯಿಂದ ಹೊರತೆಗೆದಿದ್ದಾರೆ.
ಗಾಯಗೊಂಡ ಚಾಲಕನನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಬಳಿಕ ಕಂದಕಕ್ಕೆ ಬಿದ್ದಿದ್ದ ಲಾರಿಯನ್ನು ಕ್ರೇನ್ ಸಹಾಯದಿಂದ ಮೇಲಕ್ಕೆತ್ತಲಾಗಿದೆ.
