ಮೊಬೈಲ್ಗಿಂತ ಮಕ್ಕಳಿಗೆ ಸಂಸ್ಕೃತಿಯ ಶಿಕ್ಷಣ ಮುಖ್ಯ: ಡಾ. ಸುಮಂತ್ ಕೋಹಿಮಾ
Dr. Sumant Kohima cautioned parents about the impact of excessive mobile-based education on children and stressed the importance of culture, arts, literature, music and traditional activities for holistic development.
ರಿಪ್ಪನ್ ಪೇಟೆ : “ಮಕ್ಕಳ ಶಿಕ್ಷಣ ಸಂಪೂರ್ಣವಾಗಿ ಮೊಬೈಲ್ ಆಧಾರಿತವಾಗುತ್ತಿರುವುದು ಅಪಾಯಕಾರಿ ಬೆಳವಣಿಗೆ. ಮೊಬೈಲ್ ನೀಡುವ ಕ್ಷಣಿಕ ಉತ್ತೇಜನ ಮಕ್ಕಳ ಸಹಜ ಮಾನಸಿಕ ರೋಗನಿರೋಧಕ ಶಕ್ತಿಯನ್ನು ಕುಂದಿಸಬಹುದು. ಒತ್ತಡದ ಶಿಕ್ಷಣದ ಬದಲು ಕಲೆ, ಸಾಹಿತ್ಯ, ನಾಟಕ, ಸಂಗೀತ ಹಾಗೂ ನಮ್ಮ ಸಾಂಸ್ಕೃತಿಕ ಆಚರಣೆಗಳೊಂದಿಗೆ ಶಿಕ್ಷಣವನ್ನು ಬೆರೆಸಿದಾಗ ಮಾತ್ರ ಮಕ್ಕಳಲ್ಲಿ ಉತ್ತಮ ಹಾಗೂ ಸುಸ್ಥಿರ ಸಾಧನೆ ಸಾಧ್ಯ” ಎಂದು ರಿಪ್ಪನ್ ಪೇಟೆ ಆರೋಗ್ಯ ಹೆಲ್ತ್ ಕೇರ್ ನ ವೈದ್ಯರಾದ ಡಾ. ಸುಮಂತ್ ಕೋಹಿಮಾ ಎಚ್ಚರಿಸಿದರು.
ಬ್ಲಾಸಂ ಅಕಾಡೆಮಿ ಕೊಡೂರು ಹಾಗೂ ವ್ಯಾಸ ಮಹರ್ಷಿ ಗುರುಕುಲಾಶ್ರಮ ಬಟ್ಟೆಮಲ್ಲಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಕೋಡೂರಿನ ಬ್ಲಾಸಂ ಶಾಲೆಯಲ್ಲಿ ಆಯೋಜಿಸಿದ್ದ ‘ಕೃಷ್ಣ ಲೀಲಾ ವೈಭವ’ ಮಕ್ಕಳ ಕೃಷ್ಣ ವೇಷ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳ ಶಿಕ್ಷಣದ ನೆಪದಲ್ಲಿ ಮೊಬೈಲ್ ಮೂಲಕ ನಿರಂತರವಾಗಿ ದೊರೆಯುವ ಕ್ಷಣಿಕ ಉತ್ತೇಜನ ಮಕ್ಕಳನ್ನು ವೇಗದ ಜೀವನಶೈಲಿಗೆ ಒಗ್ಗಿಸಬಹುದು. ಇದರ ಪರಿಣಾಮವಾಗಿ ಮಕ್ಕಳಲ್ಲಿ ತಾಳ್ಮೆ, ಸಹಜ ಕಲಿಕೆ ಹಾಗೂ ಮಾನಸಿಕ ಸ್ಥೈರ್ಯ ಕುಂದುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
“ಯಂತ್ರಗಳಿಗಿಂತ ಸಂಸ್ಕೃತಿಯು ಮಗುವಿನ ಭವಿಷ್ಯವನ್ನು ಉಜ್ವಲಗೊಳಿಸುತ್ತದೆ. ಮಕ್ಕಳಿಗೆ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕಲಿಕೆಯ ಅವಕಾಶ ಕಲ್ಪಿಸಬೇಕು. ಶಿಕ್ಷಣದ ಜೊತೆಗೆ ನಾಟಕ, ಸಂಗೀತ ಹಾಗೂ ಸಾಹಿತ್ಯವನ್ನು ಬೆರೆಸಿದಾಗ ಮಕ್ಕಳ ಸಮಗ್ರ ಬೆಳವಣಿಗೆಗೆ ಸಹಕಾರಿಯಾಗುತ್ತದೆ” ಎಂದು ಅವರು ಹೇಳಿದರು.
ಪೋಷಕರ ಸ್ಪರ್ಧಾತ್ಮಕ ಮನಸ್ಥಿತಿಯ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಅವರು, ಮಕ್ಕಳಿಂದ ಅತಿ ವೇಗದ ಸಾಧನೆಯನ್ನು ನಿರೀಕ್ಷಿಸುವುದು ಅವರ ಮೇಲೆ ಹೆಚ್ಚುವರಿ ಒತ್ತಡ ಉಂಟುಮಾಡಬಹುದು ಎಂದರು. ದೇಹಕ್ಕೆ ಅಗತ್ಯವಿಲ್ಲದಷ್ಟು ಆಂಟಿಬಯೋಟಿಕ್ ನೀಡುವುದು ಹೇಗೆ ಅಪಾಯಕಾರಿ ಆಗಬಹುದೋ, ಅದೇ ರೀತಿ ಮಕ್ಕಳ ಮನಸ್ಸಿನ ಮೇಲೂ ಅತಿಯಾದ ಒತ್ತಡ ಪರಿಣಾಮ ಬೀರುತ್ತದೆ ಎಂದು ಅವರು ರೂಪಕದ ಮೂಲಕ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಸಂ ಅಕಾಡೆಮಿಯ ಪ್ರಾಚಾರ್ಯ ಥಾಮಸ್ ವಹಿಸಿದ್ದರು. ಕೃಷ್ಣ ವೇಷ ಸ್ಪರ್ಧೆಯ ತೀರ್ಪುಗಾರರಾಗಿ ಖ್ಯಾತ ಕಲಾವಿದ ನೀಲ್ ಹಾಗೂ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಪ್ರಣಿತ್ ಭಾಗವಹಿಸಿದ್ದರು.
ಸಂಸ್ಥೆಯ ಆಡಳಿತಾಧಿಕಾರಿ ಮಂಜುನಾಥ್ ಬ್ಯಾಣದ ಗಣ್ಯರು ಹಾಗೂ ಪೋಷಕರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅಶ್ವಿನಿ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಉಪ ಪ್ರಾಚಾರ್ಯ ಪ್ರಕಾಶ್ ವಂದನಾರ್ಪಣೆ ಸಲ್ಲಿಸಿದರು.
ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಕ್ಕೂ ಹೆಚ್ಚು ಮಕ್ಕಳು ವಿವಿಧ ಆಕರ್ಷಕ ಕೃಷ್ಣ ವೇಷಗಳನ್ನು ಧರಿಸಿ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಗಮನ ಸೆಳೆದರು.