ಅಂಗವಿಕಲ ಯುವಕನ ಸೈಟ್ ತೆರವಿಗೆ ಅರಣ್ಯ ಇಲಾಖೆ ಯತ್ನ – ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ, ಹೈಡ್ರಾಮಾ
High drama unfolded in Hosanagara as forest officials attempted to evict a physically challenged youth from his residential plot. Angry villagers protested, leading to police intervention. Read the full ground report on Postman News Kannada.
ಹೊಸನಗರ: ತಾಲೂಕಿನ ಗರ್ತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಳೆಕೇವಿಯಲ್ಲಿರುವ ಹಾಲಂದೂರು ಗ್ರಾಮದ ಸರ್ವೆ ನಂಬರ್ 49 ರಲ್ಲಿ ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ಭಾರೀ ಹೈಡ್ರಾಮಾ ನಡೆದಿದೆ. ವಸತಿಹೀನ, ಅಂಗವಿಕಲ ಯುವಕನೋರ್ವನಿಗೆ ಸೇರಿದ ಸೈಟ್ ಜಾಗವನ್ನು ತೆರವುಗೊಳಿಸಲು ಅರಣ್ಯಾಧಿಕಾರಿಗಳು ಮುಂದಾದಾಗ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ವರದಿಯಾಗಿದೆ.
ಹಾಲಂದೂರು ಗ್ರಾಮದ ನಿವಾಸಿ, ಲೋಕೇಶ್ ಅವರ ಪುತ್ರನಾದ ಅಂಗವಿಕಲ ಯುವಕ ಸುನೀಲ್ ಕುಮಾರ್ ಕಳೆದ ಹದಿನೈದು ವರ್ಷಗಳಿಂದ ಸ್ವಂತ ಸೂರಿಗಾಗಿ ಸಣ್ಣದೊಂದು ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡಿದ್ದ. ಜೀವನ ನಿರ್ವಹಣೆಗೆ ಪರದಾಡುತ್ತಿರುವ ಈ ಯುವಕನಿಗೆ ಈ ಸಣ್ಣ ಜಾಗವೇ ಆಸರೆಯಾಗಿತ್ತು. ಆದರೆ, ದಿಢೀರನೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ಫೀಲ್ಡ್‌ಗೆ ಇಳಿದ ಅರಣ್ಯ ಇಲಾಖೆ ಅಧಿಕಾರಿಗಳು, ಈ ಶೆಡ್ ಅನ್ನು ಕಿತ್ತೊಗೆದು ಆ ಜಾಗದಲ್ಲಿ ಗಿಡ ನೆಡಲು ಮುಂದಾಗಿದ್ದರು.
ವಿಷಯ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ ಗ್ರಾಮಸ್ಥರು, ಅರಣ್ಯಾಧಿಕಾರಿಗಳ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಅಸಹಾಯಕ ಅಂಗವಿಕಲ ಯುವಕನ ಬೆಂಬಲಕ್ಕೆ ನಿಂತು, ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಪರಿಸ್ಥಿತಿ ವಿಕೋಪಕ್ಕೆ ಹೋಗುವ ಮುನ್ಸೂಚನೆ ಅರಿತ ಹೊಸನಗರ ವಲಯ ಅರಣ್ಯಾಧಿಕಾರಿ (RFO) ಹಾಗೂ ಎಸಿಎಫ್ (ACF) ಅವರು ಗ್ರಾಮಸ್ಥರು ಮತ್ತು ಸುನೀಲ್ ಕುಮಾರ್ ಜೊತೆ ಮಾತುಕತೆ ನಡೆಸಿದರು. ಯುವಕನಿಗೆ ಮನೆ ಕಟ್ಟಿಕೊಳ್ಳಲು ಅಗತ್ಯವಿರುವಷ್ಟು ಜಾಗವನ್ನು ಬಿಟ್ಟು, ಉಳಿದ ಜಾಗದಲ್ಲಿ ಗಿಡ ನೆಡುವುದಾಗಿ ಭರವಸೆ ನೀಡಿದಾಗ ವಾತಾವರಣ ಕೊಂಚ ಶಾಂತವಾಗಿತ್ತು.
ಆದರೆ, ಉಳಿದ ಜಾಗದಲ್ಲಿ ಗಿಡ ನೆಟ್ಟ ಕೂಡಲೇ ಅಧಿಕಾರಿಗಳು ತಮ್ಮ ಮಾತಿನಿಂದ ಹಿಂದೆ ಸರಿದಿದ್ದಾರೆ. ‘ನಿಮಗೆ ಜಾಗ ಬಿಟ್ಟುಕೊಡಲು ನಮಗೆ ಕಾನೂನಿನಲ್ಲಿ ಅಧಿಕಾರವಿಲ್ಲ, ನೀವು ಮೇಲಾಧಿಕಾರಿಗಳನ್ನು ಭೇಟಿ ಮಾಡಿ’ ಎಂದು ಸಬೂಬು ಹೇಳಲು ಮುಂದಾದರು. ಈ ಯೂ-ಟರ್ನ್ ನಡೆಯಿಂದ ರೊಚ್ಚಿಗೆದ್ದ ಗ್ರಾಮಸ್ಥರು, ಅರಣ್ಯ ಇಲಾಖೆ ನೆಟ್ಟಿದ್ದ ಗಿಡಗಳನ್ನು ಕಿತ್ತೊಗೆಯಲು ಮುಂದಾದರು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ತಕ್ಷಣವೇ ಮಧ್ಯಪ್ರವೇಶಿಸಿ ಉದ್ರಿಕ್ತರನ್ನು ಸಮಾಧಾನಪಡಿಸುವಲ್ಲಿ ಯಶಸ್ವಿಯಾದರು.
ಸದ್ಯಕ್ಕೆ ಯುವಕನಿಗೆ ಮನೆ ಕಟ್ಟಲು ಜಾಗವನ್ನು ಬಿಡಲಾಗಿದ್ದು, ಮೇಲಾಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಆದರೆ ಸ್ಥಳದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾ ಅರಣ್ಯಾಧಿಕಾರಿಗಳು (DFO) ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಹಾಗೂ ಬಡ ಅಂಗವಿಕಲ ಯುವಕನಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಗ್ರಾಮಸ್ಥರು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ. ಕಾರ್ಯಾಚರಣೆ ವೇಳೆ ಅರಣ್ಯಾಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸ್ ಪಡೆ ಹಾಜರಿತ್ತು.