ನೆಲ್ಲಿಬೀಡು ಟಿಪ್ಪರ್ – ಬೈಕ್ ಅಪಘಾತ: ಮಗಳ ಸಾವಿನ ಬಳಿಕ ಚಿಕಿತ್ಸೆ ಫಲಿಸದೆ ತಂದೆಯೂ ಮೃತ್ಯು
A tragic tipper-bike accident near Nellibeedu in Sagar taluk has claimed the lives of father Neelakumar Jain and his daughter Archana Jain.
ಸಾಗರ : ತಾಲ್ಲೂಕಿನ ತುಮರಿ ಸಮೀಪದ ನೆಲ್ಲಿಬೀಡು ಗ್ರಾಮದಲ್ಲಿ ಮರಳು ತುಂಬಿದ ಟಿಪ್ಪರ್ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಳೂರು ಗ್ರಾಮದ ನೀಲಕುಮಾರ್ ಜೈನ್ (45) ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾರೆ. ಇದೇ ಅಪಘಾತದಲ್ಲಿ ಅವರ ಪುತ್ರಿ ಅರ್ಚನಾ ಜೈನ್ ಸ್ಥಳದಲ್ಲೇ ಮೃತಪಟ್ಟಿದ್ದರು.
ಅರ್ಚನಾ ಜೈನ್ ಅವರು ಉಡುಪಿಯ ಖಾಸಗಿ ಹಾಸ್ಟೆಲ್ನಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದರು. ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಅವರು, ರಜೆ ಮುಗಿದ ಕಾರಣ ಮರಳಿ ಉಡುಪಿಗೆ ತೆರಳಬೇಕಾಗಿತ್ತು.
ಅವರನ್ನು ಉಡುಪಿಗೆ ಬಿಡುವ ಉದ್ದೇಶದಿಂದ ತಂದೆ ನೀಲಕುಮಾರ್ ಜೈನ್ ಅವರು ಆಗಸ್ಟ್ 25ರ ಮಂಗಳವಾರ ಬೆಳಗ್ಗೆ ಬೈಕ್ನಲ್ಲಿ ಕರೆದುಕೊಂಡು ಹೊರಟಿದ್ದರು. ಮಳೂರು ಗ್ರಾಮದಿಂದ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ನೆಲ್ಲಿಬೀಡು ಸಮೀಪ ಈ ದುರ್ಘಟನೆ ಸಂಭವಿಸಿತ್ತು.
ನೆಲ್ಲಿಬೀಡು ಸರ್ಕಲ್ ಸಮೀಪ ಮರಳು ತುಂಬಿದ ಟಿಪ್ಪರ್ ಲಾರಿ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿತ್ತು ಎಂದು ತಿಳಿದುಬಂದಿದೆ. ಡಿಕ್ಕಿಯ ರಭಸಕ್ಕೆ ಬೈಕ್ನ ಮುಂಭಾಗ ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಅರ್ಚನಾ ಜೈನ್ ರಸ್ತೆಗೆ ಬಿದ್ದ ಪರಿಣಾಮ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು.
ಅಪಘಾತದಲ್ಲಿ ನೀಲಕುಮಾರ್ ಜೈನ್ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆರಂಭದಲ್ಲಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಮುಂದುವರಿಸಲಾಗಿತ್ತು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ನೀಲಕುಮಾರ್ ಜೈನ್ ಅವರು ಸೋಮವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಒಂದೇ ಅಪಘಾತದಲ್ಲಿ ಮೊದಲು ಪುತ್ರಿ ಅರ್ಚನಾ ಜೈನ್ ಅವರನ್ನು ಕಳೆದುಕೊಂಡಿದ್ದ ಕುಟುಂಬ ಇದೀಗ ತಂದೆ ನೀಲಕುಮಾರ್ ಜೈನ್ ಅವರನ್ನೂ ಕಳೆದುಕೊಂಡಿರುವುದು ಕುಟುಂಬಸ್ಥರ ಆಕ್ರಂದನಕ್ಕೆ ಕಾರಣವಾಗಿದೆ. ಮೃತ ನೀಲಕುಮಾರ್ ಜೈನ್ ಅವರಿಗೆ ಪತ್ನಿ ಹಾಗೂ ಪುತ್ರ ಇದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.