ಕೃಷಿ ಉತ್ಪನ್ನದ ಗುಣಮಟ್ಟದ ಬಗ್ಗೆ ಗಂಭೀರ ಆರೋಪ – ದೂರು ದಾಖಲು | ಅಡಿಕೆ ಬೆಳೆಗಾರರು ನೋಡಲೇಬೇಕಾದ ಸುದ್ದಿ!
Farmer Abhilash B from Punaje village in Hosanagara has lodged a complaint alleging quality issues in an agricultural product used in his arecanut plantation, seeking laboratory testing and official investigation.
ಹೊಸನಗರ: ತಾಲೂಕಿನ ಪುಣಜೆ ಗ್ರಾಮದ ರೈತ ಹಾಗೂ ಯುವ ಮುಖಂಡ ಅಭಿಲಾಶ್ ಬಿ ಚಿಕ್ಕಮಣತಿ ಅವರು ಕೃಷಿ ಉತ್ಪನ್ನವೊಂದರ ಗುಣಮಟ್ಟದ ಬಗ್ಗೆ ಗಂಭೀರ ಆರೋಪ ಮಾಡಿದ್ದು, ಈ ಸಂಬಂಧ ತಾಲೂಕು ಕೃಷಿ ಅಧಿಕಾರಿಗಳಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ರೈತ ಅಭಿಲಾಶ್ ಬಿ ಅವರು ಜೂನ್ 8 ರಂದು ಹೊಸನಗರದ ಖಾಸಗಿ ಕೃಷಿ ಉಪಕರಣಗಳ ಅಂಗಡಿಯಿಂದ AMRUTH ಕಂಪನಿಯ ALCARE ಎಂಬ ಕೃಷಿ ಉತ್ಪನ್ನವನ್ನು ಖರೀದಿಸಿದ್ದರು. ಅಂಗಡಿ ಮಾಲೀಕರು ಈ ಉತ್ಪನ್ನದಲ್ಲಿ ಬೇವಿನ ಎಣ್ಣೆಯ ಅಂಶವಿದ್ದು ಅಡಿಕೆ ಬೆಳೆಗೆ ಉತ್ತಮ ಫಲಿತಾಂಶ ನೀಡುತ್ತದೆ ಎಂದು ತಿಳಿಸಿ ಮಾರಾಟ ಮಾಡಿದ್ದರು ಎಂದು ಅವರು ಹೇಳಿದ್ದಾರೆ.
ಆದರೆ ಜೂನ್ 9 ರಂದು ತೋಟದಲ್ಲಿ ಸಿಂಪಡಣೆ ಮಾಡುವ ವೇಳೆ ಒಂದೇ ಬ್ಯಾಚ್‌ನ ಬಾಟಲಿಗಳಲ್ಲಿದ್ದ ಮಿಶ್ರಣದ ಬಣ್ಣದಲ್ಲಿ ಅಸಾಮಾನ್ಯ ವ್ಯತ್ಯಾಸ ಕಂಡುಬಂದಿದ್ದು, ಉತ್ಪನ್ನದ ಗುಣಮಟ್ಟದ ಬಗ್ಗೆ ಅನುಮಾನ ಮೂಡಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಕಂಪನಿ ಹಾಗೂ ಮಾರಾಟಗಾರರಿಗೆ ಮಾಹಿತಿ ನೀಡಿದ ಬಳಿಕ ಅವರ ಪ್ರತಿನಿಧಿಗಳು ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಪರಿಶೀಲನೆ ವೇಳೆ ಉತ್ಪನ್ನದಲ್ಲಿ ಪ್ರಮುಖ ಅಂಶವಾಗಿರಬೇಕಾದ ಬೇವಿನ ಎಣ್ಣೆ (Neem Oil) ಇಲ್ಲದಿರುವುದನ್ನು ಕಂಪನಿಯ ಪ್ರತಿನಿಧಿಗಳು ಒಪ್ಪಿಕೊಂಡಿದ್ದಾರೆ ಎಂದು ರೈತ ಅಭಿಲಾಶ್ ಆರೋಪಿಸಿದ್ದು, ಈ ಸಂಬಂಧದ ದೂರವಾಣಿ ಸಂಭಾಷಣೆಯ ಧ್ವನಿಮುದ್ರಣ ತಮ್ಮ ಬಳಿ ಇರುವುದಾಗಿ ತಿಳಿಸಿದ್ದಾರೆ.
ಸುಮಾರು ಎರಡು ಎಕರೆ ಅಡಿಕೆ ತೋಟಕ್ಕೆ ಈ ಉತ್ಪನ್ನವನ್ನು ಬಳಸಲಾಗಿದ್ದು, ಸಿಂಪಡಣೆ ಬಳಿಕ ಕೆಲವು ಮರಗಳಲ್ಲಿ ಅಸಾಮಾನ್ಯ ಪ್ರಮಾಣದಲ್ಲಿ ಅಡಿಕೆ ಮಣಿ ಉದುರುವಿಕೆ ಕಂಡುಬಂದಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ಬೆಳೆ ಸುರಕ್ಷತೆ ಹಾಗೂ ಉತ್ಪನ್ನದ ಗುಣಮಟ್ಟದ ಬಗ್ಗೆ ಮತ್ತಷ್ಟು ಅನುಮಾನಗಳು ವ್ಯಕ್ತವಾಗಿವೆ.
ಈ ಹಿನ್ನೆಲೆಯಲ್ಲಿ ತಾಲೂಕು ಕೃಷಿ ಅಧಿಕಾರಿಗಳಿಗೆ ದೂರು ಸಲ್ಲಿಸಿರುವ ರೈತರು, ಉತ್ಪನ್ನದ ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ಒಳಪಡಿಸಿ ಅದರ ಗುಣಮಟ್ಟ, ನೋಂದಣಿ, ಅನುಮತಿ ಹಾಗೂ ಕಾನೂನುಬದ್ಧತೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ.
ರೈತರಿಗೆ ತಪ್ಪು ಮಾಹಿತಿ ನೀಡಿ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡಿರುವುದು ಸಾಬೀತಾದಲ್ಲಿ ತಯಾರಕ ಕಂಪನಿ, ವಿತರಕರು ಹಾಗೂ ಮಾರಾಟಗಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಜೊತೆಗೆ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ಹಾಗೂ ಕೃಷಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈತ ಅಭಿಲಾಶ್ ಬಿ ಒತ್ತಾಯಿಸಿದ್ದಾರೆ.