Headlines

ಆಗುಂಬೆ ಘಾಟಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ, ಮೂವರು ಪ್ರಾಣಾಪಾಯದಿಂದ ಪಾರು

ಆಗುಂಬೆ ಘಾಟಿಯಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ, ಮೂವರು ಪ್ರಾಣಾಪಾಯದಿಂದ ಪಾರು

A major tragedy was narrowly averted in Agumbe Ghat after a large tree fell on a moving Brezza car. Three passengers escaped unharmed, while the vehicle suffered damage and traffic was disrupted briefly.

ಆಗುಂಬೆ, ಜೂ.14: ಆಗುಂಬೆ ಘಾಟಿಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಘಟನೆ ಒಂದು ಭಾರಿ ದುರಂತವನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿದೆ. ರಸ್ತೆ ಬದಿಯಲ್ಲಿದ್ದ ಬೃಹತ್ ಗಾತ್ರದ ಮರ ಏಕಾಏಕಿ ಉರುಳಿ ಸಂಚರಿಸುತ್ತಿದ್ದ ಬ್ರಿಜಾ ಕಾರಿನ ಮೇಲೆ ಬಿದ್ದ ಪರಿಣಾಮ ವಾಹನ ಜಖಂಗೊಂಡಿದ್ದು, ಕಾರಿನಲ್ಲಿದ್ದ ಮೂವರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಭಾನುವಾರ ಬೆಳಗ್ಗೆ ಸುಮಾರು 10 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು, ಮರ ಬಿದ್ದ ರಭಸಕ್ಕೆ ಕಾರಿನ ಮುಂಭಾಗದ ಗಾಜು ಸಂಪೂರ್ಣ ಒಡೆದು ಹೋಗಿದ್ದು, ಬಾನೆಟ್ ಭಾಗಕ್ಕೂ ಹಾನಿಯಾಗಿದೆ. ಘಟನೆ ಸಂಭವಿಸಿದ ವೇಳೆ ಕಾರಿನಲ್ಲಿ ಮೂವರು ಪ್ರಯಾಣಿಕರು ಇದ್ದರು.
ಮರ ಬಿದ್ದ ತಕ್ಷಣ ಸ್ಥಳೀಯರು ಹಾಗೂ ಇತರ ವಾಹನ ಸವಾರರು ನೆರವಿಗೆ ಧಾವಿಸಿ, ಕಾರಿನಲ್ಲಿದ್ದವರನ್ನು ಸುರಕ್ಷಿತವಾಗಿ ಹೊರತೆಗೆದರು. ಅದೃಷ್ಟವಶಾತ್ ಯಾರಿಗೂ ಗಾಯಗಳಾಗದ ಕಾರಣ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ.

ಘಟನೆಯ ಪರಿಣಾಮ ಆಗುಂಬೆ ಘಾಟಿ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಮರವನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಿದರು.

ಸುದ್ದಿ ತಿಳಿದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ಆಗುಂಬೆ ಘಾಟಿ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಬದಿಯ ಮರಗಳು ಉರುಳುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚಿಸಲಾಗಿದೆ.

About The Author