ಹೊಸನಗರದಿಂದ ಬೆಂಗಳೂರಿಗೆ ಹೊರಟಿದ್ದ ಗುರುಶಕ್ತಿ ಬಸ್ ಶಿರಾ ಬಳಿಯಲ್ಲಿ ಅಪಘಾತ – ಹಲವರಿಗೆ ಗಾಯ
A Gurushakti bus traveling from Hosanagara to Bengaluru met with an accident near Sira on Tumakuru highway after colliding with a parked onion-loaded lorry. Several passengers sustained minor injuries.
ಹೊಸನಗರ : ತುಮಕೂರು ಜಿಲ್ಲೆಯ ಶಿರಾ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ರಸ್ತೆ ಅಪಘಾತದಲ್ಲಿ ಚಾಲಕ ಹಾಗೂ ಕೆಲವು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.
ಹೊಸನಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಗುರುಶಕ್ತಿ ಖಾಸಗಿ ಸ್ಲೀಪರ್ ಬಸ್ ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ನೀರುಳ್ಳಿ ಲೋಡ್ ಹೊತ್ತ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.
ಅಪಘಾತ ಸಂಭವಿಸಿದ ವೇಳೆ ಬಸ್ಸಿನಲ್ಲಿ ಸುಮಾರು 30 ಮಂದಿ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ. ಡಿಕ್ಕಿಯ ತೀವ್ರತೆಗೆ ಬಸ್‌ನ ಮುಂಭಾಗ ಭಾಗಶಃ ಜಖಂಗೊಂಡಿದ್ದು, ಕೆಲಕಾಲ ಹೆದ್ದಾರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳೀಯರು ಹಾಗೂ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳಿಗೆ ನೆರವು ನೀಡಿದರು.
ಘಟನೆಯಲ್ಲಿ ಬಸ್ ಚಾಲಕನ ಕಾಲಿಗೆ ಗಾಯಗಳಾಗಿದ್ದು, ಇತರ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಅಪಘಾತದ ನಂತರ ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ಸಂಚಾರವನ್ನು ಸುಗಮಗೊಳಿಸಿದರು. ಶಿರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.