



ಶುಂಠಿ ಹೊಲದಲ್ಲಿ ಹಾವು ಕಚ್ಚಿ 6 ತಿಂಗಳ ಗರ್ಭಿಣಿ ದುರಂತ ಅಂತ್ಯ , ಶಾಸಕರ ಭೇಟಿ – ಸಾಂತ್ವಾನ
A tragic incident in Anandapura: A 26-year-old, 6-month pregnant woman died of a snakebite while resting in a ginger field in Sulagodu village. Read the full details.
ಆನಂದಪುರ: ಹೊಲದಲ್ಲಿ ಕೆಲಸ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ವಿಷಪೂರಿತ ಹಾವು ಕಚ್ಚಿ ಆರು ತಿಂಗಳ ಗರ್ಭಿಣಿಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಸುಳಗೋಡು ಗ್ರಾಮದಲ್ಲಿ ಶನಿವಾರ (ಮೇ 2) ನಡೆದಿದೆ.
ಮೃತರನ್ನು ಸುಳಗೋಡು ಗ್ರಾಮದ ವೀರಭದ್ರ ಅವರ ಪತ್ನಿ ಸ್ವಾತಿ (26) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಶನಿವಾರ ಮಧ್ಯಾಹ್ನ ಸುಮಾರು 3:30ರ ಹೊತ್ತಿಗೆ ಸ್ವಾತಿ ಅವರು ತಮ್ಮ ಪತಿ ಹಾಗೂ ಇತರ ಕೂಲಿ ಕಾರ್ಮಿಕರೊಂದಿಗೆ ಗ್ರಾಮದ ಶುಂಠಿ ಹೊಲವೊಂದರಲ್ಲಿ ಕೆಲಸಕ್ಕೆ ತೆರಳಿದ್ದರು. ಮಧ್ಯಾಹ್ನದ ಊಟ ಮುಗಿಸಿ ಎಲ್ಲರೂ ಮರದಡಿ ವಿಶ್ರಾಂತಿ ಪಡೆಯುತ್ತಿದ್ದಾಗ, ಸ್ವಾತಿ ಅವರ ಬಲಗಾಲಿನ ಮೊಣಕಾಲಿಗೆ ವಿಷಸರ್ಪವೊಂದು ಕಚ್ಚಿದೆ.
ನಾಟಿ ವೈದ್ಯರ ಮೊರೆ, ವಿಳಂಬದಿಂದ ಪ್ರಾಣಕ್ಕೆ ಕುತ್ತು:
ಹಾವು ಕಚ್ಚಿದ ತಕ್ಷಣವೇ ಅವರನ್ನು ಕಣ್ಣೂರಿನ ನಾಟಿ ವೈದ್ಯರೊಬ್ಬರ ಬಳಿ ಕರೆದೊಯ್ದು ಔಷಧಿ ಕೊಡಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆನಂದಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಪತ್ರೆಗೆ ತಲುಪಿದಾಗ ಪರೀಕ್ಷಿಸಿದ ವೈದ್ಯರು, ಸ್ವಾತಿ ಅವರು ಆಗಲೇ ಮೃತಪಟ್ಟಿರುವುದನ್ನು ದೃಢಪಡಿಸಿದರು. ನಂತರ, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಶಿವಮೊಗ್ಗದ ಮೆಗಾನ್ (McANN) ಆಸ್ಪತ್ರೆಗೆ ರವಾನಿಸಲಾಯಿತು. ಈ ಘಟನೆ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಹಾರಕ್ಕೆ ಕಟ್ಟುನಿಟ್ಟಿನ ಸೂಚನೆ: ಸ್ಥಳದಲ್ಲಿದ್ದ ಅಧಿಕಾರಿಗಳೊಂದಿಗೆ ಮಾತನಾಡಿದ ಶಾಸಕರು, ಸರ್ಕಾರದ ವತಿಯಿಂದ ಮೃತರ ಕುಟುಂಬಕ್ಕೆ ಸಿಗಬೇಕಾದ ಗರಿಷ್ಠ ಪರಿಹಾರವನ್ನು ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಒದಗಿಸುವಂತೆ ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡಿದರು.
ಶಾಸಕರ ಭೇಟಿ ಮತ್ತು ಸಾಂತ್ವನ:
ದುರ್ಘಟನೆಯ ಸುದ್ದಿ ತಿಳಿದ ತಕ್ಷಣ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಸುಳಗೋಡು ಗ್ರಾಮಕ್ಕೆ ಭೇಟಿ ನೀಡಿ, ಶೋಕತಪ್ತ ಕುಟುಂಬಕ್ಕೆ ಸಾಂತ್ವನ ಹೇಳಿದರು. ಇದೇ ವೇಳೆ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿ ತಮ್ಮ ವತಿಯಿಂದ ವೈಯಕ್ತಿಕ ಧನಸಹಾಯ ನೀಡಿದರು.
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಶಾಸಕರು:
“ಹಾವು ಕಚ್ಚಿದ ಸಂದರ್ಭದಲ್ಲಿ ವಿಳಂಬ ಮಾಡದೆ ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದರೆ ಪ್ರಾಣ ಉಳಿಸಬಹುದು. ತಾಲೂಕಿನ ಎಲ್ಲಾ ಆಸ್ಪತ್ರೆಗಳಲ್ಲೂ ಹಾವು ಕಡಿತಕ್ಕೆ ಅಗತ್ಯ ಚಿಕಿತ್ಸಾ ಸೌಲಭ್ಯಗಳಿವೆ. ಆದರೆ, ಮಾಹಿತಿಯ ಕೊರತೆಯಿಂದಾಗಿ ಜನ ನಾಟಿ ಔಷಧಿಯ ಮೊರೆ ಹೋಗಿ ವಿಳಂಬ ಮಾಡುತ್ತಿರುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ. ಆದ್ದರಿಂದ ಹಾವು ಕಚ್ಚಿದ ಕೂಡಲೇ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಿ” ಎಂದು ಶಾಸಕರು ಇದೇ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.