ಸರಿಗಮಪ ಜೂನಿಯರ್ ಮೆಗಾ ಆಡಿಷನ್ಗೆ ಆಯ್ಕೆಯಾದ ಗ್ರಾಮೀಣ ಪ್ರತಿಭೆ ಕೀರ್ತಿಗೆ ಸನ್ಮಾನ
Student Keerthi from Soraba, who got selected for Zee Kannada Sarigamapa Season 22 mega audition without formal training, was felicitated for her remarkable achievement.
ಸೊರಬ: ಬಡತನದ ನಡುವೆಯೇ ಅಪಾರ ಪ್ರತಿಭೆ ಪ್ರದರ್ಶಿಸಿ ಯಾವುದೇ ಶಾಸ್ತ್ರೀಯ ಸಂಗೀತ ತರಬೇತಿ ಇಲ್ಲದೆ ‘ಜೀ ಕನ್ನಡ ಸರಿಗಮಪ’ ಸೀಸನ್ 22ರ ಮೆಗಾ ಆಡಿಷನ್ಗೆ ಆಯ್ಕೆಯಾದ ವಿದ್ಯಾರ್ಥಿನಿ ಕೀರ್ತಿಗೆ ಸೊರಬ ತಾಲೂಕಿನಲ್ಲಿ ಭಾನುವಾರ ಭರ್ಜರಿ ಸನ್ಮಾನ ಕಾರ್ಯಕ್ರಮ ನಡೆಯಿತು.

ತಾಲೂಕಿನ ಹರೀಶಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಕೀರ್ತಿ ಸಾಧನೆಯನ್ನು ಶ್ಲಾಘಿಸಿದ ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುನೀಲ್ ಗೌಡ, “ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಸರಿಯಾದ ವೇದಿಕೆ ದೊರೆತರೆ ಅವರು ಅಸಾಧ್ಯವನ್ನೂ ಸಾಧಿಸಬಲ್ಲರು ಎಂಬುದಕ್ಕೆ ಕೀರ್ತಿಯೇ ಸಾಕ್ಷಿ” ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸೌಲಭ್ಯಗಳಿಲ್ಲದ ಪರಿಸ್ಥಿತಿಯಲ್ಲಿಯೇ ಕೀರ್ತಿ ತನ್ನ ದನಿಯ ಮಾಧುರ್ಯ ಹಾಗೂ ಆತ್ಮವಿಶ್ವಾಸದ ಮೂಲಕ ರಾಜ್ಯ ಮಟ್ಟದ ವೇದಿಕೆಗೆ ತಲುಪಿರುವುದು ತಾಲೂಕಿನ ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು.
ಹಳ್ಳಿಯ ಸೊಗಡಿನಲ್ಲಿ ಬೆಳೆದ ಈ ಬಾಲಕಿ ಇದೀಗ ಪ್ರತಿಷ್ಠಿತ ಸಂಗೀತ ವೇದಿಕೆಯಲ್ಲಿ ತನ್ನ ಕಂಠಸಿರಿಯನ್ನೇ ಪ್ರದರ್ಶಿಸಲು ಸಜ್ಜಾಗಿರುವುದು ಎಲ್ಲರಿಗೂ ಪ್ರೇರಣೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ್ ಮೋಗೇರ್ ವಹಿಸಿದ್ದರು. ಹರೀಶಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವಾನಂದ ತಬಲಿ ಸೇರಿದಂತೆ ಹಲವರು ವಿದ್ಯಾರ್ಥಿನಿಯ ಸಾಧನೆಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಾಕೇಶ್ ತಬಲಿ, ಮಾಜಿ ಉಪಾಧ್ಯಕ್ಷ ರವಿಕುಮಾರ್, ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್, ಸಿ.ಆರ್.ಪಿ ಮಂಜುನಾಥ್, ಸುಧಾಕರ್ ನಾಯ್ಕ, ಉಮಾಪತಿ ನಾಯ್ಕ, ರಾಜು ಕೆಂಚಿಕೊಪ್ಪ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
