Headlines

ಒಂದೇ ಕುಟುಂಬದ ನಾಲ್ವರ ಸಜೀವ ದಹನ ಪ್ರಕರಣ – ಮೂವರ ವಿರುದ್ದ ಪ್ರಕರಣ ದಾಖಲು|FIR

ತೀರ್ಥಹಳ್ಳಿ ತಾಲೂಕಿನ ಅರಳಸುರಳಿಯ ಬ್ರಾಹ್ಮಣವೊಂದರ ಕುಟುಂಬದ ಸಜೀವ ದಹನದ ಕುರಿತಂತೆ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಅ. 8 ರಂದು ರಾಘವೇಂದ್ರ ಕೇಕುಡ, ನಾಗರತ್ನ, ಶ್ರೀರಾಮ್ ಮತ್ತು ಭರತ್ ಎಂಬ ಒಂದೇ ಕುಟುಂಬದ ನಾಲ್ವರು ಮನೆಯ ಕೊಠಡಿಯೊಂದರಲ್ಲಿ ಕಟ್ಟಿಗೆ ಜೋಡಿಸಿಕೊಂಡು ಸಜೀವ ದಹನಕ್ಕೆ ಮುಂದಾಗಿದ್ದರು.

ಭರತ್ ಸಾವಿನ ನಂತರ ಪ್ರಕರಣವನ್ನು ಯುಡಿಆರ್ (ಅಸಹಜ ಸಾವಿನ ವರದಿ) ಎಂದು ದಾಖಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಭರತ್ ಸಾವಿನ ನಂತರ ರಾಘವೇಂದ್ರ ಅವರ ಪತ್ನಿಯ ಸಹೋದರನ ಹೇಳಿಕೆಯ ಮೇಲೆ ಎಫ್‌ಐಆರ್ ದಾಖಲಾಗಿದೆ. ಡಾ.ಸುಧೀಂದ್ರ, ಪಾ.ರಾ ಕೃಷ್ಣಮೂರ್ತಿ ಮತ್ತು ರಾಘವೇಂದ್ರ ಅವರ ನಾದನಿ ವಿನೋದರವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ರಾಘವೇಂದ್ರ ಕೇಕುಡರಿಗೆ, ಕೃಷ್ಣಮೂರ್ತಿ, ಮಂಜುನಾಥ, ರಾಮಕೃಷ್ಣ ಹಾಗೂ ಡಾ, ಸುಧೀಂದ್ರ ಎಂಬ ನಾಲ್ವರು ಸಹೋದರರಿದ್ದು ಇವರ ಪೈಕಿ ಮಂಜುನಾಥ ಈಗಾಗಲೇ ವಿಧಿವಶರಾಗಿದ್ದಾರೆ.

ಮಂಜುನಾಥ್ ಅವರ ಪತ್ನಿ ವಿನೋದ ಇವರಿಗೆ ಜಮೀನುಗಳಿಗೆ ಸಂಬಂಧಿಸಿದಂತೆ ಹಿಸ್ಸೆಯಾಗಿದ್ದು, ರಾಮಕೃಷ್ಣ ಕೇಕುಡ ಇವರು ಹಿಸ್ಸೆ ತೆಗೆದುಕೊಂಡು ಬೇರೆ ವಾಸವಾಗಿದ್ದರು ಎನ್ನಲಾಗಿದೆ.

ಉಳಿದ ಸಹೋದರರಾದ ಡಾ.ಸುಧೀಂದ್ರ, ಮತ್ತು ಪಾರಾ ಕೃಷ್ಣಮೂರ್ತಿ ರಾಘವೇಂದ್ರ ಕೇಕುಡರೊಂದಿಗೆ ಜಮೀನಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಿಪಿಎ ಮಾಡಿಕೊಂಡಿದ್ದರು.

ರಾಘವೇಂದ್ರ ಕೇಕುಡ ಜಮೀನಿನ ಅಭಿವೃದ್ಧಿಗಾಗಿ ಸಾಲ ಮಾಡಿದ್ದರು. ಇವರ ಎರಡನೇ ಸಹೋದರ ಮಂಜುನಾಥ್ ಅವರ ಪತ್ನಿ ವಿನೋದರವರಿಗೆ ಜಮೀನಿನ ಬಾಬ್ತಾಗಿ 10 ಲಕ್ಷ ರೂಪಾಯಿಗಳನ್ನು ರಾಘವೇಂದ್ರ ಕೇಕುಡರಿಂದ ಪಡೆದಿದ್ದು, ಪಡೆದ ಹಣದ ಬಗ್ಗೆ ಪತ್ರ ನೊಂದಣಿಯಾಗಿರಲಿಲ್ಲ.

ಸುಮಾರು 2 ವರ್ಷಗಳ ಹಿಂದಿನಿಂದಲೂ ಜಮೀನಿನ ಮೇಲೆ ಮಾಡಿದ ಸಾಲದ ವಿಚಾರದಲ್ಲಿ ಡಾ, ಸುದೀಂದ್ರ, ಪಾರಾ ಕೃಷ್ಣ ಮೂರ್ತಿ ಹಾಗೂ ಮಂಜುನಾಥ್ ಪತ್ನಿ ವಿನೋದ ರಾಘವೇಂದ್ರರ ಕುಟುಂಬಕ್ಕೆ ಹಲವಾರು ಬೈದು ಹಲ್ಲೆಗೆ ಯತ್ನಿಸಿ ಗಲಾಟೆ ಮಾಡಿ ಮಾನಸಿಕ ಹಿಂಸೆ ನೀಡಿದ್ದರು ಎನ್ನಲಾಗಿದೆ.

ಸಾಲ ತೀರಿಸದಿದ್ದರೆ ಮನೆ ಖಾಲಿ ಮಾಡುವಂತೆ ಬೆದರಿಸಿ ಮನೆ ಖಾಲಿ ಮಾಡದಿದ್ದರೆ ಶಿವಮೊಗ್ಗದಿಂದ ಗೂಂಡಾಗಳನ್ನು ಕರೆಸಿ ಮನೆಯಿಂದ ಹೊರ ಹಾಕಿಸುವುದಾಗಿ ಹಾಗೂ ಬ್ಯಾಂಕಿನ ಸಾಲವನ್ನು ಕಟ್ಟಬೇಕೆಂದು ಬೆದರಿಸಿದ್ದರು.

ಈ ವಿಚಾರದಲ್ಲಿ ರಾಘವೇಂದ್ರ ಕುಟುಂಬ ಅವರುಗಳ ಬೆದರಿಕೆಗೆ ಮನನೊಂದು ಮಾನಸಿಕ ಹಿಂಸೆ ತಡೆಯಲಾಗದೇ ದೇಹ ತ್ಯಾಗವಾಗಿರುತ್ತದೆ ಎಂದು ತೇಜ್ ಪ್ರಕಾಶ್ ದೂರಿನಲ್ಲಿ ದಾಖಲಿಸಿದ್ದಾರೆ.

ಅದ್ದರಿಂದ ರಾಘವೇಂದ್ರ ಕುಟುಂಬ ವರ್ಗದವರ ದುರ್ಮರಣಕ್ಕೆ ಕಾರಣರಾದ ಡಾ, ಸುದೀಂದ್ರ, ಪಾ.ರಾ ಕೃಷ್ಣಮೂರ್ತಿ, ವಿನೋದ ರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಡಾ.ಸುಧೀಂದ್ರ ಶಿವಮೊಗ್ಗದ ಮೆಗ್ಗಾನ್ ನಲ್ಲಿ ವೈದ್ಯರಾಗಿದ್ದಾರೆ. ಪಾರಾ ಕೃಷ್ಣಮೂರ್ತಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *