ಜ್ಞಾನದಿಂದ ಪ್ರಪಂಚವನ್ನೆ ಗೆಲ್ಲಬಹುದು – ಡಾ ಜಗದೀಶ್ ಹೊಸಮನಿ | Bankapura
ಬಂಕಾಪುರ : ಈ ತಂತ್ರಜ್ಞಾನದ ಯುಗದಲ್ಲಿ ಸರ್ಕಾರಿ ಕಸಗೂಡಿಸುವನ ಕೆಲಸಕ್ಕೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸಲಾಗುತ್ತಿದೆ.ಸಮಯ ವ್ಯರ್ಥ ಮಾಡದೇ ಅಧ್ಯಯನ ಮಾಡಿ ಸಾಧಕರಾಗಿ ಹೊರಹೊಮ್ಮುವಂತೆ ವಿದ್ಯಾರ್ಥಿಗಳಾಗಬೇಕು. ಮನುಷ್ಯನನ್ನು ಕತ್ತಲೆಯಿಂದ ಬೆಳಕಿನೆಡೆಗೆ ವಯ್ಯುವ ಶಕ್ತಿ ಶಿಕ್ಷಣಕ್ಕಿದೆ. ಅಂತಹ ಜ್ಞಾನವನ್ನು ವಿದ್ಯಾರ್ಥಿಗಳು ಪಡೆದು ಕೊಂಡಾಗ ಪ್ರಪಂಚವನ್ನೇ ಗೆಲ್ಲಬಹುದು ಎಂದು ಹಾವೇರಿ ಜಿ.ಎಚ್. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಗದೀಶ್ ಹೊಸಮನಿ ಹೇಳಿದರು.
ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್. ಎಸ್., ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗಗಳ ಸಮಾರೋಪ ಹಾಗೂ ಬಿ.ಎ. ಮತ್ತು ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ ವಿದ್ಯಾರ್ಥಿಗಳು ಬಂಕಾಪುರದ ಐತಿಹಾಸಿಕ ಇತಿಹಾಸವನ್ನು ಅರಿಯಬೇಕಿದೆ. ರಾಷ್ಟ್ರಕೂಟರ ಕಾಲದಲ್ಲಿ ಬಂಕರಸ ಆಡಳಿತ ಮಾಡಿದ ಬಂಕಾಪುರ ಏಕಚಕ್ರನಗರ ಎಂಬ ಖ್ಯಾತನಾಮ ಪಡೆದುಕೊಂಡಿದೆ. ಆದಿ ಕವಿ ರನ್ನಮಯ ವಿದ್ಯಾರ್ಜನೆ ಹಾಡಿದ ಕೀರ್ತಿ ಬಂಕಾಪುರಕ್ಕಿದ್ದು, ಅದನ್ನರಿತು ವಿದ್ಯಾರ್ಥಿಗಳು ಶ್ರಮವಹಿಸಿ ಅಧ್ಯಯನ ಮಾಡಿದಾಗ ಬಂಕಾಪುರದ ಇತಿಹಾಸ ಮುಂದುವರೆಯಲಿದೆ ಎಂದರು. ಟಿಪ್ಪು ಸುಲ್ತಾನರು ಪ್ರಥಮ ಬಾರಿಗೆ ಬಂಕಾಪುರದಲ್ಲಿ ಮೊಹರಂ ಆಚರಣೆ ಮಾಡಿದ ಇತಿಹಾಸವಿದೆ. 1951 ರ ವರೆಗೆ ಬಂಕಾಪುರ ತಾಲೂಕು ಕೇಂದ್ರವಾಗಿ ಮೆರೆದಿತ್ತು. ಇಂತಹ ರಾಜ್ಯ ಆಡಳಿತ ಪ್ರದೇಶವಾಗಿದ್ದ ಬಂಕಾಪುರದ ಇತಿಹಾಸವನ್ನು ವಿದ್ಯಾರ್ಥಿಗಳು ಪುನರುತ್ಥಾನಗೊಳಿಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಹೆತ್ತ ತಂದೆ ತಾಯಿಯ ಋಣ ಹೊತ್ತು ಬೆಳೆಸುತ್ತಿರುವ ಭೂಮಿಯ ಋಣ ನಿಸ್ವಾರ್ಥಿತೆಯಿಂದ ವಿದ್ಯಾ ದಾನ ಮಾಡಿದ ಗುರುವಿನ ಋಣ ತೀರಿಸುವ ಮಕ್ಕಳಾಗಿ ಬಾಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಡಾ. ದಿನೇಶಪ್ಪ ಸಿಂಗಾಪುರ್, ಬಂಕಾಪುರ್ ಪುರಸಭೆಯ ಸದಸ್ಯರಾದ ಆಂಜನೇಯ ಗುಡಗೇರಿ ಮಾತನಾಡಿದರು. ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ಸಭೆಯಲ್ಲಿ ಕಳೆದ ಬಾರಿ ಹೆಚ್ಚು ಅಂಕ ಪಡೆದ ಹಾಗೂ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹಾಗೂ ಪಿಎಚಡಿ ಮಾಡಿದ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ತೆವರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಬಂಕಾಪುರ್ ಮುಖಂಡರಾದ ಅಶೋಕ್ ಶೆಟ್ಟರ್, ನೀಲಪ್ಪ ಸಣ್ಣಕ್ಕಿ, ರಾಜು ಬಡ್ಡಿ, ಉಪನ್ಯಾಸಕರಾದ ನಿಂಗಪ್ಪ ಕಲಕೋಟಿ, ಡಾ.ಮಂದಾಕಿನಿ, ಲೂಬ್ನಾನಾಜ್, ಮಹದೇವಪ್ಪ, ಮಹೇಶ್, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರವೀಣ್, ಅನಿತಾ ಸೇರಿದಂತೆ ಅತಿಥಿ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಮುಂತಾದ ಉಪಸ್ಥಿತರಿದ್ದರು.
ವರದಿ: ನಿಂಗರಾಜ್ ಕೊಡಲ್
ಹಾವೇರಿ ಜಿಲ್ಲೆ ಬಂಕಾಪುರ