ಮಳಲಿಮಠದ ಕಾರ್ತಿಕ ದೀಪೋತ್ಸವ ಶ್ರೀಗಳ ಪಟ್ಟಾಧಿಕಾರ ರಜತ ಮಹೋತ್ಸವದಲ್ಲಿ ರಂಭಾಪುರಿ ಜಗದ್ಗುರುಗಳು
ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ ಗುರು
ರಿಪ್ಪನ್‌ಪೇಟೆ;-ಮನುಷ್ಯ ಜೀವನದಲ್ಲಿ ಅರ್ಥ ಅರಿವು ಆಯುಷ್ಯ ಬಹಳ ಮುಖ್ಯ. ಗುರುವೆಂದರೆ ವ್ಯಕ್ತಿಯಲ್ಲ. ಅದೊಂದು ಮಹಾನ್ ಶಕ್ತಿ. ಅಜ್ಞಾನದ ಕತ್ತಲೆ ಕಳೆದು ಸುಜ್ಞಾನದೆಡೆಗೆ ಕರೆದುಕೊಂಡು ಹೋಗುವ ಶಕ್ತಿಯೇ ಶ್ರೀ ಗುರು ಎಂದು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಸಮೀಪದ ಮಳಲಿ ಸಂಸ್ಥಾನಮಠದಲ್ಲಿ ಅಯೋಜಿಸಲಾದ ಕಾರ್ತಿಕ ದೀಪೋತ್ಸವ ಹಾಗೂ ಡಾ||ನಾಗಭೂಷಣ ಶ್ರೀಗಳವರ ಪಟ್ಟಾಧಿಕಾರದ ರಜತ ಮಹೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಅಧರ್ಮದಿಂದ ಮನುಷ್ಯ ತಾತ್ಕಾಲಿಕವಾಗಿ ಮೇಲೇರಿದರೂ ಅಂತಿಮವಾಗಿ ಬುಡಸಹಿತ ನಾಶವಾಗುತ್ತಾನೆ. ಕೆಟ್ಟವರು ತುಂಬಾ ಬೆಳೆಯಬಹುದು. ಆದರೆ ಉಳಿಯಲು ಸಾಧ್ಯವಿಲ್ಲ. ಒಳ್ಳೆಯವರನ್ನು ತುಂಬಾ ತುಳಿಯಬಹುದು ಆದರೆ ನಾಶ ಮಾಡಲು ಸಾಧ್ಯವಿಲ್ಲ. ಗುರಿಯಿಲ್ಲದ ಗುರಿ ಸಾಧಿಸದ ವ್ಯಕ್ತಿಯ ಜೀವನ ನಿರರ್ಥಕ. ಮನೆ ಕಟ್ಟಲು ಹಣ ಬೇಕು. ಮನಸ್ಸು ಕಟ್ಟಲು ಗುಣ ಬೇಕು. ವೀರಶೈವ ಧರ್ಮದಲ್ಲಿ ಜ್ಞಾನ ಕ್ರಿಯಾತ್ಮಕವಾದ ಬದುಕಿಗೆ ಬಹಳಷ್ಟು ಬೆಲೆಯಿದೆ. ಶೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ತತ್ವ ಸಿದ್ಧಾಂತಗಳು ಸಕಲರ ಬಾಳಿಗೆ ಬೆಳಕು ತೋರಿವೆ. ತತ್ವತ್ರಯಗಳ ಪರಿಪಾಲನೆಯಿಂದ ಜೀವಾತ್ಮ ಪರಮಾತ್ಮನಾಗುವ ಸಾಧನೆಯ ಅರಿವನ್ನು ಸಿದ್ಧಾಂತ ಶಿಖಾಮಣಿಯಲ್ಲಿ ಕಾಣಬಹುದು.
1998ರಲ್ಲಿ ಮಳಲಿ ಸಂಸ್ಥಾನಮಠದ ಡಾ|| ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಅಧಿಕಾರ ಸೂತ್ರ ವಹಿಸಿಕೊಂಡು ಇಪ್ಪತ್ತೆöÊದು ವರುಷಗಳು ಪೂರ್ಣಗೊಂಡಿವೆ. ಪಟ್ಟಾಧಿಕಾರದ ರಜತ ಮಹೋತ್ಸವ ಹಿನ್ನೆಲೆಯಲ್ಲಿ ಹಲವಾರು ರಚನಾತ್ಮಕ ಕಾರ್ಯಗಳನ್ನು ಕೈಗೊಂಡಿದ್ದು ಎಲ್ಲರಿಗೂ ಹರುಷ ತಂದಿದೆ. ನಾಡಿನ ಭಕ್ತ ಸಮುದಾಯದಲ್ಲಿ ಆತ್ಮ ವಿಶ್ವಾಸ ಮೂಡಿಸುವ ಧಾರ್ಮಿಕ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ಬಹುವಾಗಿ ಶ್ರಮಿಸಿದ್ದಾರೆ. ಕೃಷಿ ಕ್ಷೇತ್ರದಲ್ಲೂ ಮಹತ್ತರವಾದ ಸಾಧನೆ ಕೈಗೊಂಡಿದ್ದಾರೆ. ಅವರ ಕ್ರಿಯಾಶೀಲ ಬದುಕಿಗೆ ಈ ಸಮಾರಂಭ ಸಾಕ್ಷಿಯಾಗಿದೆ ಎಂದು ಹರುಷ ವ್ಯಕ್ತಪಡಿಸಿ ಶ್ರೀಗಳವರಿಗೆ ರೇಶ್ಮೆ ಮಡಿ, ಚಿನ್ನದುಂಗುರ, ಸ್ಮರಣಿಕೆ ಫಲ ಪುಷ್ಪದೊಂದಿಗೆ “ಶಿವತತ್ವ ಪ್ರಬೋಧಕ” ಪ್ರಶಸ್ತಿಯಿತ್ತು ಶುಭ ಹಾರೈಸಿದರು.
ಸಮಾರಂಭ ಉದ್ಘಾಟಿಸಿದ ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ ನಾಡು ನುಡಿಗಳಿಗೆ ಸಂಸ್ಕೃತಿ ಸಾಮರಸ್ಯ ಬದುಕಿಗೆ ಮಠಗಳ ಕೊಡುಗೆ ಅಮೂಲ್ಯ. ಬದುಕು ಬದಲಾಗಬೇಕಾದರೆ ಬದುಕುವ ದಾರಿ ಬದಲಾಗಬೇಕು. ಐಶ್ವರ್ಯದ ಅಡಿಪಾಯ ದುಡಿಮೆಯಿಲ್ಲಿದೆ ಎಂಬುದನ್ನು ಮರೆಯಬಾರದು.ಮಳಲಿಮಠದ ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಧರ್ಮಮುಖಿಯಾಗಿ ಮತ್ತು ಸಮಾಜಮುಖಿಯಾಗಿ ಕೆಲಸ ಕಾರ್ಯ ಕೈಗೊಂಡ ಕಾರಣದಿಂದ ಶ್ರೀ ಮಠವನ್ನು ಸಮೃದ್ಧವಾಗಿ ಬೆಳೆಸಿದ್ದಾರೆ. ಅವರಿಂದ ಸಮಾಜ ಇನ್ನಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಭಕ್ತರೆಲ್ಲರ ಭಾವನೆಗಳಿಗೆ ಸ್ಪಂದಿಸಿ ಶ್ರೀ ಮಠವನ್ನು ಇನ್ನೂ ಎತ್ತರಕ್ಕೆ ಬೆಳೆಸಲೆಂದರು.
ಅಧ್ಯಕ್ಷತೆ ವಹಿಸಿದ ಡಾ|| ನಾಗಭೂಷಣ ಶ್ರೀಗಳು ಮಾತನಾಡಿ ಬದುಕಲು ಹಣ ಬೇಕು. ಹೊಂದಿಕೊಂಡು ಬಾಳಲು ಒಳ್ಳೆಯ ಗುಣ ಸಾಕು. ವೀರಶೈವ ಧರ್ಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಜೀವನ ದರ್ಶನದ ಹಿರಿಮೆಯನ್ನು ಬೋಧಿಸಿದ್ದಾರೆ. ಮಳಲಿಮಠದ ಅಧಿಕಾರ ಸೂತ್ರ ಹಿಡಿದು 25 ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಶ್ರೀರಕ್ಷೆ ಸದಾ ನಮಗಿದೆ ಎಂಬ ತೃಪ್ತಿ ಭಾವನೆ ನಮ್ಮದಾಗಿದೆ ಎಂದರು.
‘ಸುದ್ದಿ ಸಂಪದ’ವನ್ನು ಶಾಸಕ ಆರಗ ಜ್ಞಾನೇಂದ್ರ, ದಿನದರ್ಶಿಕೆಯನ್ನು ಹರಪನಹಳ್ಳಿ ಕ್ಷೇತ್ರದ ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಬಿಡುಗಡೆಗೊಳಿಸಿ ಮಾತನಾಡಿದರು.
ಅಪ್ಸ್ಕೂಸ್ ಆಧ್ಯಕ್ಷ .ಇಂದೂದರ ಗೌಡ್ರು,ಬಸವೇಶ್ವರ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಉದ್ಯಮಿ ಕೆ.ಆರ್ ಪ್ರಕಾಶ್, ಆಖಿಲಭಾರತ ಶರಣ ಸಾಹಿತ್ಯ ಪರಿಷತ್ ತಾಲ್ಲೂಕ್ ಆಧ್ಯಕ್ಷ ರೇವಣಪ್ಪಗೌಡ ದುಮ್ಮಾ, ಬಿ.ಯುವರಾಜ್,ಆಲುವಳಿ ವೀರೇಶ್, ದೇವೇಂದ್ರಪ್ಪಗೌಡ,ಹೆಚ್.ವಿ.ಈಶ್ವರಪ್ಪಗೌಡ,ವಿರೂಪಾಕ್ಷ ಇನ್ನಿತರರು ಹಾಜರಿದ್ದರು.
ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿಗಳು, ಮುಕ್ತಿಮಂದಿರ ಕ್ಷೇತ್ರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮಿಗಳು, ಬಂಕಾಪುರ ಅರಳೆಲೆ ಹಿರೇಮಠದ ರೇವಣಸಿದ್ಧೇಶ್ವರ ಶಿವಾಚಾರ್ಯರು, ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು, ಕವಲೇದುರ್ಗದ ಮರುಳಸಿದ್ಧ ಶಿವಾಚಾರ್ಯರು ಉಪದೇಶಮೃತವನ್ನಿತ್ತರು. ರಿಪ್ಪನ್‌ಪೇಟೆಯ ಆರ್.ಎಸ್.ಪ್ರಶಾಂತ ಪ್ರಾಸ್ತಾವಿಕ ಮಾತನಾಡಿದರು. ಸುರೇಶ ಮತ್ತು ನಾಗರತ್ನಮ್ಮ ಇವರಿಂದ ಭಕ್ತಿಗೀತೆಗಳು ಜರುಗಿದವು.
ಕಗ್ಗಲಿ ಶಿವಪ್ರಕಾಶ ಪಾಟೀಲ ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು. ಎನ್.ವರ್ತೇಶ್ ವಂದಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಹಲವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳಿಂದ ಗುರುರಕ್ಷೆ ನೀಡಿ ಆಶಿರ್ವದಿಸಲಾಯಿತು.ನಂತರ ಗಿಣಿವಾರದ ಕೊಡಚಾದ್ರಿ ಆಂಗ್ಲಮಾಧ್ಯಮ ವಸತಿ ಶಾಲೆಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ಜರುಗಿತು.