Ripponpete | ಕೆಂಚನಾಲ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಳಿ – ಸ್ಥಳಕ್ಕಾಗಮಿಸದೇ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ | ನರಬಲಿಗಾಗಿ ಕಾಯುತ್ತಿದೆಯಾ ಅರಣ್ಯ ಇಲಾಖೆ
ರಿಪ್ಪನ್‌ಪೇಟೆ : ಇಲ್ಲಿನ ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಆಲವಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆ ದಾಳಿ ನಡೆಸಿ ರೈತರ ಬೆಳೆಗಳನ್ನು ನಾಶಪಡಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಶುಕ್ರವಾರ ರಾತ್ರಿ ಘಟನೆ ನಡೆದಿದ್ದು ಸ್ಥಳೀಯರು ಆತಂಕದಲ್ಲಿ ಮುಂಜಾನೆಯೇ ಸ್ಥಳೀಯ ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ತಿಳಿಸಿದರೂ ಸ್ಥಳಕ್ಕೆ ಬರಲು ಮೀನಮೇಷ ಎಣಿಸಿದ್ದಾರೆ,ಇಲಾಖೆಯವರು ನರಬಲಿಗಾಗಿ ಕಾಯುತ್ತಿದ್ದಾರೋ ಏನೋ..? ಎಂದು ಸ್ಥಳೀಯರು ಆರೋಪಿಸುತಿದ್ದಾರೆ
ಆಲುವಳ್ಳಿ ಗ್ರಾಮದ ಕಮದೂರು, ಮೂಡಾಗಲು, ಬಂಕಾಪುರ ಬಳಿ ಕಾಡಾನೆಗಳು ಲಗ್ಗೆಯಿಟ್ಟು ಅಡಿಕೆ, ಬಾಳೆ ತೋಟ ಧ್ವಂಸಗೊಳಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಆಲವಳ್ಳಿಯ ಮಲ್ಲಿಕಾರ್ಜುನ ಮತ್ತು ಮಲ್ಲೇಶ್ ಎಂಬುವರ ಅಡಿಕೆ ತೋಟಕ್ಕೆ ನುಗ್ಗಿ ಬಾಳೆ ಗಿಡವನ್ನು ಮುರಿದು ಹಾಕಿ ಸಾಕಷ್ಟು ನಷ್ಟ ಮಾಡಿವೆ. ಇನ್ನೂ ಬಂಕಾಪುರ, ಮೂಡಾಗಲು ಬಳಿಯ ಕಲ್ಲುಕೆರೆಯಲ್ಲಿ ನೀರು ಕುಡಿದು ನಾಗಾರ್ಜುನಸ್ವಾಮಿ ಎಂಬುವರ ಅಡಿಕೆ ತೋಟದಲ್ಲಿ ತಿರುಗಾಡಿರುವುದರೊಂದಿಗೆ ತೋಟದಲ್ಲಿನ ಹಸಿ ಹುಲ್ಲು ಮೇಯ್ದುಕೊಂಡು ತಂತಿ ಬೇಲಿ ದಾಟಿಕೊಂಡು ಸಂಪರ್ಕ ರಸ್ತೆಯಲ್ಲಿ ಹೋಗಿರುತ್ತವೆಂದು ಹೆಜ್ಜೆ ಗುರುತಿನಿಂದ ತಿಳಿಯಬಹುದಾಗಿದೆ.
ರಾತ್ರಿ ಕಾಡಾನೆ ದಾಳಿಯಾಗಿದ್ದು ಆತಂಕ್ಕೊಳಗಾದ ಸ್ಥಳೀಯರು ಮುಂಜಾನೆಯೇ ಈ ಬಗ್ಗೆ ಅರಸಾಳು ಅರಣ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ಮಾಹಿತಿ ತಿಳಿಸಿದ್ದರೂ ಸ್ಥಳಕ್ಕೆ ಶನಿವಾರ 11 ರ ಸುಮಾರಿಗೆ ಬಂದು ಕಾಟಾಚಾರಕ್ಕೆ ಸ್ಥಳ ಪರಿಶೀಲಿಸಿ ತೆರಳಿದ್ದಾರೆ, ಯಾವ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸುತಿದ್ದಾರೆ.