ಆಗುಂಬೆ ಘಾಟ್ ರಸ್ತೆ ಮತ್ತೆ ಸ್ಥಗಿತ – ಧರೆ ಕುಸಿದು ಮರ ಬಿದ್ದು ಸಂಚಾರ ತಡೆ
ತೀರ್ಥಹಳ್ಳಿ : ಮಲೆನಾಡಿನ ಜೀವನಾಡಿಯಾದ ಆಗುಂಬೆ ಘಾಟ್ ರಸ್ತೆ ಮತ್ತೆ ಪ್ರಕೃತಿಯ ಕೋಪಕ್ಕೆ ತುತ್ತಾಗಿದೆ. ಐದನೇ ತಿರುವಿನ ಬಳಿ ಧರೆ ಕುಸಿದು, ದೊಡ್ಡ ಮರ ರಸ್ತೆ ಮಧ್ಯೆ ಬಿದ್ದ ಪರಿಣಾಮ ಸಂಜೆ ವೇಳೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರು ಭಾರೀ ತೊಂದರೆಗೆ ಒಳಗಾಗಿದ್ದಾರೆ.
ಮರ ಬಿದ್ದುದರಿಂದ ರಸ್ತೆ ಸಂಪೂರ್ಣ ಮುಚ್ಚಿಕೊಂಡಿದ್ದು, ತೆರವು ಕಾರ್ಯ ಕೂಡಾ ಗೊಂದಲಮಯವಾಗಿದೆ. ಸ್ಥಳೀಯರ ಪ್ರಕಾರ ಬೆಳಗಿನವರೆಗೆ ಸಂಚಾರ ಸುಗಮವಾಗುವ ಸಾಧ್ಯತೆ ಕಡಿಮೆ. ಕಲ್ಲುಮಣ್ಣು ಹಾಗೂ ದೊಡ್ಡ ಮರಗಳು ರಸ್ತೆಯಲ್ಲೇ ಅಡ್ಡವಾಗಿ ಬಿದ್ದಿರುವುದರಿಂದ ಕಾರ್ಯಾಚರಣೆ ವಿಳಂಬವಾಗಿದೆ.
ಆಗುಂಬೆ ಘಾಟ್ ಮಲೆನಾಡು ಹಾಗೂ ಕರಾವಳಿ ಭಾಗಗಳನ್ನು ಸಂಪರ್ಕಿಸುವ ಪ್ರಮುಖ ದಾರಿಯಾಗಿದ್ದು, ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ಸಂಚಾರ ಸ್ಥಗಿತಗೊಂಡಿರುವುದರಿಂದ ಪ್ರಯಾಣಿಕರು ಪರ್ಯಾಯ ಮಾರ್ಗಗಳನ್ನು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ.
ಪ್ರತಿ ಮಳೆಗಾಲದಲ್ಲೂ ಆಗುಂಬೆ ಘಾಟ್ನಲ್ಲಿ ಧರೆ ಕುಸಿತ ಮತ್ತು ಮರ ಬಿದ್ದ ಘಟನೆಗಳು ಸಾಮಾನ್ಯವಾಗಿಬಿಟ್ಟಿದ್ದು, ಹಲವಾರು ಬಾರಿ ರಸ್ತೆ ಬ್ಲಾಕ್ ಆಗಿರುವುದರಿಂದ ಪ್ರಯಾಣಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.