ಆನೆಗದ್ದೆ ಶಾಲೆಯ ಶಿಕ್ಷಕಿಯ ವರ್ಗಾವಣೆ – ವಿದ್ಯಾರ್ಥಿಗಳಿಂದ ಶಿಕ್ಷಣಾಧಿಕಾರಿ ಕಛೇರಿ ಎದುರು ಪ್ರತಿಭಟನೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಆನೆಗದ್ದೆ ಶಾಲೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಶಾಲೆ ಆದರೆ ಖಾಸಗಿ ವಿದ್ಯಾಸಂಸ್ಥೆಗಳ ವಾಹನವು ಈ ಭಾಗದ ಹಳ್ಳಿಹಳ್ಳಿಗೆ ನುಗ್ಗಿದ ಪರಿಣಾಮ ಇಂತಹ ಹೆಸರುವಾಸಿ ಶಾಲೆಯು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂತಕ್ಕೆ ಹೋಗಿತ್ತು ಇದನ್ನು ಮನಗಂಡ ಊರಿನ ಗ್ರಾಮಸ್ಥರು ವಿಶೇಷ ಆಸಕ್ತಿ ವಹಿಸಿ ಹಲವು ಹೊಸ ದಾಖಲಾತಿಗಳನ್ನು ಸೇರಿಸುವ ಮೂಲಕ ಇಂತಹ ಶಾಲೆಯನ್ನು ಉಳಿಸಿಕೊಂಡಿದ್ದರು ಹಾಗೇಯೆ ಅಲ್ಲಿನ ಶಿಕ್ಷಕರು ಅದಕ್ಕೆ ಉತ್ತಮ ಸಾಥ್ ನೀಡಿದ್ದರು.
ಪ್ರಸ್ತುತ ಶಾಲೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರ ಪ್ರಶಂಸೆಗೆ ಒಳಗಾಗಿರುವ ಶಿಕ್ಷಕಿ ಅನ್ವಿತಾ ಎಂಬುವವರನ್ನು ಈಗ ಹೆಚ್ಚುವರಿ ಪಟ್ಟಿಗೆ ಸೇರಿಸಿದ್ದು ಊರಿನ ಗ್ರಾಮಸ್ಥರ , ಪೋಷಕರು ಹಾಗೂ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ ಕೂಡಲೇ ಅವರನ್ನು ಹೆಚ್ಚುವರಿ ಪಟ್ಟಿಯಿಂದ ಕೈ ಬೀಡಲು ಸುಮಾರು 41 ವಿದ್ಯಾರ್ಥಿಗಳು , ಎಸ್ ಡಿಎಂ ಸಿ ಸದಸ್ಯರು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಈ ಸಂಧರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಸುರೇಶ್ ಮಾತನಾಡಿ, ನಮ್ಮ ಶಾಲೆಗೆ 4 ಜನ ಶಿಕ್ಷಕರು ಇರಬೇಕು ಎಂಬ ನಿಯಮವಿದೆ. ಇವರು ಹಿಂದಿನ ವರ್ಷದ ಮಕ್ಕಳ ಗಣತಿಯನ್ನು ಪರಿಗಣಿಸಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆಗೆ ಹೊರಟಿದ್ದಾರೆ. ಎಸ್ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರ ಹೋರಾಟದ ಫಲವಾಗಿ ಕಳೆದ ವರ್ಷಕ್ಕಿಂತ ಈ ವರ್ಷ 20 ಮಕ್ಕಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಶಾಲೆಯ ಕಾರ್ಯ ಚಟುವಟಿಕೆಗಳು ಸುಗಮವಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಶಿಕ್ಷಕಿ ಅನ್ವಿತಾರವರು ಹೆಚ್ಚುವರಿಯಾಗಿ ಪ್ರಕಟವಾದಾಗ ನಮ್ಮ ಶಾಲೆಯಿಂದ ಅವರನ್ನು ಕಳುಹಿಸುವುದಾದರೆ ಮಕ್ಕಳ ಪಾಠ ಪ್ರವಚನ ಶಾಲೆಯ ಕಾರ್ಯ ಚಟುವಟಿಕೆಗೆ ತೊಂದರೆಯಾಗುತ್ತದೆ. ಹೊಸದಾಗಿ ದಾಖಲಾದ ಮಕ್ಕಳು ಟಿ.ಸಿಯನ್ನು ತೆಗೆದುಕೊಂಡು ಹೋಗುತ್ತಾರೆ. ಶಾಲೆಯ ದಾಖಲಾತಿ ಮತ್ತೆ ಕುಸಿದು ಸರ್ಕಾರಿ ಶಾಲೆಯನ್ನೇ ಮುಚ್ಚುವ ಸ್ಥಿತಿ ತಲುಪುತ್ತದೆ. ಆದ್ದರಿಂದ ಮಕ್ಕಳ ಶಾಲೆಯ ಹಿತದೃಷ್ಟಿಯಿಂದ ಅನ್ವಿತಾರನ್ನು ಹೆಚ್ಚುವರಿ ಪಟ್ಟಿಯಿಂದ ಕೈ ಬೀಡಬೇಕು ಎಂದು ಆಗ್ರಹಿಸಿದರು
ಬಿಇಓ ಚೇತನ ಸ್ಪಷ್ಟನೆ – ಮಕ್ಕಳ ಹಿತದೃಷ್ಟಿಯಿಂದ ಕ್ರಮ
ಬೆಳಿಗ್ಗೆಯಿಂದಲೇ ವಿದ್ಯಾರ್ಥಿಗಳು ಉಪವಾಸಕ್ಕೆ ಕುಳಿತಿದ್ದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಪಿ. ಚೇತನ ಅವರು ಸ್ಪಷ್ಟನೆ ನೀಡಿದರು. ಸರ್ಕಾರದಿಂದ ಬಂದ ಆದೇಶವನ್ನು ಎಲ್ಲಾ ಅಧಿಕಾರಿಗಳು ಪಾಲಿಸಲೇಬೇಕಾದ ಕಡ್ಡಾಯವಿದೆ ಎಂಬುದನ್ನು ಅವರು ಮೊದಲಿಗೆ ನೆನಪಿಸಿದರು. ಆದಾಗ್ಯೂ, ಮಕ್ಕಳ ಹಿತಾಸಕ್ತಿಯನ್ನೇ ಮುಖ್ಯವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಅವರು ಮಾತನಾಡುವ ವೇಳೆ, ಶಿಕ್ಷಕಿ ಅನ್ವಿತಾ ಹೆಚ್ಚುವರಿ ಪಟ್ಟಿಗೆ ಸೇರಿದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಉಂಟಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಮೇಲಾಧಿಕಾರಿಗಳ ಆದೇಶದ ಮೇರೆಗೆ ಆನೆಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮತ್ತೊಬ್ಬ ಶಿಕ್ಷಕರ ನಿಯೋಜನೆ ಮಾಡಲು ಶಿಫಾರಸು ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ಯುವ ಮುಖಂಡ ನಗರ ನಿತಿನ್ , ಆನೆಗದ್ದೆ ಶಾಲೆಯ ಎಸ್ಡಿಎಂಸಿ ಸದಸ್ಯರಾದ ರಮೇಶ್, ಪ್ರಸಾಂತ್, ಲಕ್ಷ್ಮೀಶ, ಶೇಖರಪ್ಪ, ಚಂದ್ರಶೇಖರ, ವೇದಾವತಿ, ರಮೇಶ್, ಮಲ್ಲಪ್ಪಗೌಡ, ಇಂದಿರಮ್ಮ, ಅಶೋಕ, ಚೈತ್ರಾ, ಜ್ಯೋತಿ, ಇಂದಿರಾ, ವೆಂಕಟೇಶ್ ಹಾಗೂ ಆನೆಗದ್ದೆ ಶಾಲೆಯ 41 ವಿದ್ಯಾರ್ಥಿಗಳು ಭಾಗವಹಿಸಿದ್ದರು.