94ನೇ ವಸಂತಕ್ಕೆ ಕಾಲಿಟ್ಟ ಕಾಗೋಡು ತಿಮ್ಮಪ್ಪ – ಬೆಳ್ಳೂರಿನಲ್ಲಿ ಶಾಲಾ ಮಕ್ಕಳಿಗೆ ಸಿಹಿ ವಿತರಣೆ ಮೂಲಕ ಆಚರಣೆ
ಸಾಗರ ಕ್ಷೇತ್ರದ ಜನಪ್ರಿಯ ಹಿರಿಯ ನಾಯಕರು, ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರು ಹಾಗೂ ಕರ್ನಾಟಕ ವಿಧಾನಸಭೆಯ ಮಾಜಿ ಸ್ಪೀಕರ್ ಡಾ. ಕಾಗೋಡು ತಿಮ್ಮಪ್ಪ ರವರು ತಮ್ಮ 94ನೇ ಜನ್ಮದಿನವನ್ನು ಇಂದು ಆಚರಿಸಿಕೊಂಡಿದ್ದಾರೆ. ಸರಳತೆ, ನಿಷ್ಠೆ, ಪ್ರಾಮಾಣಿಕತೆ ಮತ್ತು ಜನಪರ ಹೋರಾಟಗಳಿಂದ ರಾಜ್ಯ ರಾಜಕೀಯಕ್ಕೆ ಮೌಲ್ಯಗಳನ್ನು ತುಂಬಿದ ಕಾಗೋಡು ತಿಮ್ಮಪ್ಪ ಅವರ ಜೀವನಗಾಥೆ, ಇಂದಿಗೂ ಅನೇಕ ರಾಜಕಾರಣಿಗಳಿಗೆ ಪಾಠವಾಗಿಯೇ ಉಳಿದಿದೆ.
ಈ ಮಹತ್ವದ ಸಂಧರ್ಭವನ್ನು ಸ್ಮರಿಸಿ, ಸಾಗರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಮಹೇಂದ್ರ ಬುಕ್ಕಿವರೆ ಹಾಗೂ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ರಿಪ್ಪನ್ ಪೇಟೆ ಸಮೀಪದ ಬೆಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ವಿತರಣೆ ಮಾಡಿ, ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಮಕ್ಕಳ ನಗೆಮುಖಗಳು ಈ ದಿನವನ್ನು ಇನ್ನಷ್ಟು ಅರ್ಥಪೂರ್ಣವಾಗಿಸಿತು.
ಈ ಸಂಧರ್ಭದಲ್ಲಿ ಮಾತನಾಡಿದ ಮಹೇಂದ್ರ ಬುಕ್ಕಿವರೆ ರಾಜ್ಯ ರಾಜಕಾರಣದ ಇತಿಹಾಸದಲ್ಲಿ ನಿಷ್ಕಳಂಕ ರಾಜಕೀಯ ಪಯಣ ನಡೆಸಿರುವ ಡಾ. ಕಾಗೋಡು ತಿಮ್ಮಪ್ಪ ಅವರು ಸದಾ ಹಿಂದುಳಿದ ವರ್ಗಗಳ ಪರ ಹೋರಾಡಿ, ಸಾಮಾಜಿಕ ನ್ಯಾಯದ ಹಾದಿಯಲ್ಲಿ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದಾರೆ. ಅವರ ಚಿಂತನೆ ಮತ್ತು ನಡೆ-ನುಡಿಗಳು ಜನಪ್ರಿಯ ನಾಯಕನಂತೆ ಮಾತ್ರವಲ್ಲ, ತಾತ್ಸಾರವಿಲ್ಲದ ಶಿಕ್ಷಕರಂತೆ ಸಮಾಜವನ್ನು ದಾರಿದೀಪದಂತೆ ಬೆಳಗಿಸಿದ್ದಾರೆ ಎಂದರು.
ಸಿಹಿ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸ್ಥಳೀಯ ಕಾಂಗ್ರೆಸ್ ನಾಯಕರು – “ಕಾಗೋಡು ತಿಮ್ಮಪ್ಪ ಅವರ ನೈತಿಕತೆ, ಅವರ ಶುದ್ಧ ರಾಜಕೀಯ ಮತ್ತು ಸಮಾಜಸೇವೆಯ ಬದ್ಧತೆ ನಮ್ಮಂತಹ ಯುವಕರಿಗೆ ನಿಜವಾದ ಪ್ರೇರಣೆ. ಅವರ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾವು ಸದಾ ಕಾರ್ಯನಿರ್ವಹಿಸುತ್ತೇವೆ” ಎಂದು ಅಭಿಪ್ರಾಯಪಟ್ಟರು.
94ನೇ ಜನ್ಮದಿನದ ಸಂಭ್ರಮವನ್ನು ಸರಳವಾದರೂ ಅರ್ಥಪೂರ್ಣವಾದ ಸಮಾಜಮುಖಿ ಸೇವಾ ಕಾರ್ಯಕ್ರಮಗಳ ಮೂಲಕ ಆಚರಿಸುವ ಮೂಲಕ, ಕಾರ್ಯಕರ್ತರು “ಜನಸೇವೆಯೇ ನಿಜವಾದ ಗೌರವ” ಎಂಬ ತತ್ತ್ವವನ್ನು ನೆನಪಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ರವಿ , ಕಳಸೆ ಲಿಂಗಪ್ಪ ,ದೇವರಾಜ್ , ಶರತ್ ಕುಮಾರ್ ಹಾಗೂ ಇನ್ನಿತರರು ಇದ್ದರು.