ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿಗೆ ಸಮಟಗಾರಿನಲ್ಲಿ ಅದ್ದೂರಿ ಸನ್ಮಾನ | National Award-winning teacher Ratnakumari S. was felicitated at Samatagaru near Hunch in Shivamogga district. MLA Araga Jnanendra praised her dedicated service to rural education.
ರಿಪ್ಪನ್‌ಪೇಟೆ: ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಹಲವು ವರ್ಷಗಳಿಂದ ಮಕ್ಕಳ ಶಿಕ್ಷಣ ಹಾಗೂ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವ ಶಿಕ್ಷಕಿ ರತ್ನಕುಮಾರಿ ಎಸ್. ಅವರಿಗೆ ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಹುಂಚ ಸಮೀಪದ ಸಮಟಗಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಗ್ರಾಮಸ್ಥರು, ಶಾಲಾ ಪೋಷಕರು ಹಾಗೂ ವಿದ್ಯಾರ್ಥಿಗಳ ವತಿಯಿಂದ ಆಯೋಜಿಸಿದ್ದ ‘ಊರಿನ ಉತ್ಸವ’ ಕಾರ್ಯಕ್ರಮದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ರತ್ನಕುಮಾರಿ ಅವರನ್ನು ಸನ್ಮಾನಿಸಿ ನಂತರ ಅವರು ಮಾತನಾಡಿ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗುವುದು ಸಾಮಾನ್ಯ ಸಾಧನೆಯಲ್ಲ. ಶಿಕ್ಷಕರು ತಮ್ಮ ಸೇವಾ ವಿವರಗಳು ಹಾಗೂ ಸಾಧನೆಗಳನ್ನು ಸಲ್ಲಿಸಿ, ನಿಗದಿತ ಆಯ್ಕೆ ಪ್ರಕ್ರಿಯೆಯ ಮೂಲಕ ಅರ್ಹತೆ ಸಾಬೀತುಪಡಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಶಿಫಾರಸು ಅಥವಾ ವೈಯಕ್ತಿಕ ಪ್ರಭಾವವಿಲ್ಲದೆ ರತ್ನಕುಮಾರಿ ಅವರು ರಾಷ್ಟ್ರಮಟ್ಟದ ಗೌರವಕ್ಕೆ ಪಾತ್ರರಾಗಿರುವುದು ಶ್ಲಾಘನೀಯ ಎಂದು ಆರಗ ಜ್ಞಾನೇಂದ್ರ ಹೇಳಿದರು.
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಸೀಮಿತ ಸೌಲಭ್ಯಗಳ ನಡುವೆಯೂ ಮಕ್ಕಳ ಕಲಿಕೆಗೆ ವಿಭಿನ್ನ ವಿಧಾನಗಳನ್ನು ಅಳವಡಿಸಿಕೊಂಡು ಉತ್ತಮ ಫಲಿತಾಂಶಕ್ಕಾಗಿ ಶ್ರಮಿಸಿರುವ ರತ್ನಕುಮಾರಿ ಅವರ ಬದ್ಧತೆ ಇತರ ಶಿಕ್ಷಕರಿಗೂ ಸ್ಫೂರ್ತಿಯಾಗಬೇಕು ಎಂದರು.
ಶಿಕ್ಷಣ ಕೇವಲ ಅಂಕಗಳಿಗೆ ಸೀಮಿತವಾಗಬಾರದು
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣದ ವ್ಯಾಪ್ತಿ ವಿಸ್ತಾರವಾಗಿದ್ದರೂ, ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವುದಕ್ಕೂ ಹೆಚ್ಚಿನ ಆದ್ಯತೆ ನೀಡಬೇಕಿದೆ. ಶಿಕ್ಷಣದ ಉದ್ದೇಶ ಕೇವಲ ಮಕ್ಕಳನ್ನು ಬುದ್ಧಿವಂತರನ್ನಾಗಿ ಮಾಡುವುದಲ್ಲ. ಅವರಲ್ಲಿ ಕರುಣೆ, ಸಹಾನುಭೂತಿ, ಸಾಮಾಜಿಕ ಹೊಣೆಗಾರಿಕೆ ಹಾಗೂ ಮಾನವೀಯ ಗುಣಗಳನ್ನು ಬೆಳೆಸುವುದೂ ಶಿಕ್ಷಣದ ಪ್ರಮುಖ ಭಾಗವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಅಭಿಪ್ರಾಯಪಟ್ಟರು.
ಕುಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕಿಯೊಬ್ಬರ ಕಾರ್ಯವನ್ನು ಕೇಂದ್ರ ಸರ್ಕಾರ ಗುರುತಿಸಿ ರಾಷ್ಟ್ರ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಮಟಗಾರು ಮಾತ್ರವಲ್ಲದೆ ಇಡೀ ತೀರ್ಥಹಳ್ಳಿ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.
ಸನ್ಮಾನ ಸ್ವೀಕರಿಸಿ ಭಾವುಕರಾದ ರತ್ನಕುಮಾರಿ
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಶಾಲಾ ಪೋಷಕರು, ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ರತ್ನಕುಮಾರಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.
ಊರಿನ ಮುತ್ತೈದೆಯರು ಭಾರತೀಯ ಸಂಪ್ರದಾಯದಂತೆ ಅರಿಶಿಣ-ಕುಂಕುಮ ಹಚ್ಚಿ ಬಾಗಿನ ಸಮರ್ಪಿಸಿ ಗೌರವ ಸಲ್ಲಿಸಿದ ಸಂದರ್ಭ ರತ್ನಕುಮಾರಿ ಅವರು ಭಾವುಕರಾದರು. ಗ್ರಾಮಸ್ಥರು ನೀಡಿದ ಪ್ರೀತಿ, ಅಭಿಮಾನ ಹಾಗೂ ಗೌರವಕ್ಕೆ ಕೃತಜ್ಞತೆ ಸಲ್ಲಿಸಿದ ಅವರು, ತಮ್ಮ ಸೇವಾ ಬದುಕಿನಲ್ಲಿ ಸಮಟಗಾರಿನ ಜನತೆ ನೀಡಿದ ಪ್ರೋತ್ಸಾಹ ಮತ್ತು ವಿಶ್ವಾಸವನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.
ಗ್ರಾಮೀಣ ಶಿಕ್ಷಕಿಗೆ ರಾಷ್ಟ್ರ ಗೌರವ ಹೆಮ್ಮೆಯ ಸಂಗತಿ
ಹೊಂಬುಜ ಜೈನಮಠದ ಜಗದ್ಗುರು ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಸೀಮಿತ ಸೌಲಭ್ಯಗಳ ನಡುವೆಯೂ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುತ್ತಿದ್ದಾರೆ. ಪ್ರಕೃತಿಯೊಂದಿಗೆ ಬೆಸೆದುಕೊಂಡು ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಕಲಿಕಾ ಚಟುವಟಿಕೆಗಳನ್ನು ರೂಪಿಸಿದ ರತ್ನಕುಮಾರಿ ಅವರ ಸೇವೆಯನ್ನು ಗುರುತಿಸಿ ರಾಷ್ಟ್ರ ಪ್ರಶಸ್ತಿ ನೀಡಿರುವುದು ಗ್ರಾಮೀಣ ಶಿಕ್ಷಣ ಕ್ಷೇತ್ರಕ್ಕೆ ದೊರೆತ ಗೌರವವಾಗಿದೆ ಎಂದು ಹೇಳಿದರು.
106 ಸರ್ಕಾರಿ ಶಾಲೆಗಳಿಗೆ ನೆರವು
ಕಾರ್ಯಕ್ರಮದಲ್ಲಿ ಬೆಂಗಳೂರು ಶ್ರೀಗಂಧ ಸಂಸ್ಥೆಯ ಪ್ರತಿನಿಧಿಗಳು ಗ್ರಾಮೀಣ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಸಂಸ್ಥೆ ಕೈಗೊಂಡಿರುವ ವಿವಿಧ ಕಾರ್ಯಗಳ ಕುರಿತು ಮಾಹಿತಿ ನೀಡಿದರು.
ಈವರೆಗೆ ಸುಮಾರು 106 ಸರ್ಕಾರಿ ಶಾಲೆಗಳಿಗೆ ಆರ್ಥಿಕ ಹಾಗೂ ಶೈಕ್ಷಣಿಕ ನೆರವು ಒದಗಿಸಲಾಗಿದ್ದು, 180ಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಇವರಲ್ಲಿ 75ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮುಂದುವರಿಸುತ್ತಿದ್ದು, 28ಕ್ಕೂ ಅಧಿಕ ಮಂದಿ ಉದ್ಯೋಗ ಪಡೆದಿದ್ದಾರೆ ಎಂದು ತಿಳಿಸಿದರು.
ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿಸುವುದು ಹಾಗೂ ಉನ್ನತ ಶಿಕ್ಷಣದ ಮೂಲಕ ಅವರು ಸ್ವಾವಲಂಬಿಗಳಾಗಲು ನೆರವಾಗುವುದು ಸಂಸ್ಥೆಯ ಉದ್ದೇಶವಾಗಿದೆ ಎಂದು ಪ್ರತಿನಿಧಿಗಳು ಹೇಳಿದರು.
ಅಭಿನಂದನಾ ಸಮಿತಿಯ ಅಧ್ಯಕ್ಷ ಸೋಮಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ಸದಸ್ಯರಾದ ಬಂಡಿ ರಾಮಚಂದ್ರ, ಶ್ವೇತಾ ಆರ್. ಬಂಡಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಡಯಟ್ ಪ್ರಾಚಾರ್ಯ ಹೆಚ್.ಆರ್. ಕೃಷ್ಣಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ವೈ. ಗಣೇಶ್, ಜಗದೀಶ್ ಕಾಗಿನಲ್ಲಿ, ಬಸವಣ್ಯಪ್ಪ, ಈಶ್ವರಪ್ಪ, ತೀರ್ಥಪ್ಪ, ಪುಟ್ಟಸ್ವಾಮಿ, ನಿವೃತ್ತ ಶಿಕ್ಷಕ ಶ್ರೀಧರಮೂರ್ತಿ ಸೇರಿದಂತೆ ಗಣ್ಯರು, ಗ್ರಾಮಸ್ಥರು, ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗ್ರಾಮೀಣ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರ ಸೇವೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವುದು ಸಮಟಗಾರಿನ ಶೈಕ್ಷಣಿಕ ಇತಿಹಾಸದಲ್ಲಿ ಗಮನಾರ್ಹ ಹೆಜ್ಜೆಯಾಗಿದ್ದು, ರತ್ನಕುಮಾರಿ ಅವರ ಸಾಧನೆ ಸ್ಥಳೀಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹೊಸ ಉತ್ಸಾಹ ನೀಡಿದೆ.
