w
Headlines
Home » ಕುಡಿಯುವ ನೀರಿಗಾಗಿ ಬಾಳೂರು ಗ್ರಾಮಸ್ಥರ ಆಕ್ರೋಶ; ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ

ಕುಡಿಯುವ ನೀರಿಗಾಗಿ ಬಾಳೂರು ಗ್ರಾಮಸ್ಥರ ಆಕ್ರೋಶ; ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ

Screenshot 2026 09 15 19 10 52 589 com.openai.chatgpt edit

ಕುಡಿಯುವ ನೀರಿಗಾಗಿ ಬಾಳೂರು ಗ್ರಾಮಸ್ಥರ ಆಕ್ರೋಶ; ಗ್ರಾ.ಪಂ. ಕಚೇರಿ ಎದುರು ಪ್ರತಿಭಟನೆ

Residents of Baluru and Kaleshwara villages protest outside Baluru Gram Panchayat after drinking water supply was disrupted for nearly a week due to a faulty borewell motor.

ರಿಪ್ಪನ್‌ಪೇಟೆ: ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳೂರು ಹಾಗೂ ಕಾಳೇಶ್ವರ ಗ್ರಾಮಗಳಲ್ಲಿ ಕಳೆದ ಒಂದು ವಾರದಿಂದ ಕುಡಿಯುವ ನೀರಿನ ಸರಬರಾಜು ಸ್ಥಗಿತಗೊಂಡಿರುವುದನ್ನು ಖಂಡಿಸಿ ಗ್ರಾಮಸ್ಥರು ಪಂಚಾಯಿತಿ ಕಚೇರಿ ಎದುರು ದಿಢೀರ್ ಪ್ರತಿಭಟನೆ ನಡೆಸಿದರು.

ನೂರಾರು ಕುಟುಂಬಗಳಿಗೆ ನೀರು ಪೂರೈಸುವ ಪ್ರಮುಖ ಬೋರ್‌ವೆಲ್‌ನ ಮೋಟಾರ್ ಕೆಟ್ಟು ಹಲವು ದಿನಗಳಾದರೂ ದುರಸ್ತಿ ಅಥವಾ ಬದಲಿ ಮೋಟಾರ್ ಅಳವಡಿಸಿಲ್ಲ. ಪರಿಣಾಮವಾಗಿ ಕಳೆದ ಐದಾರು ದಿನಗಳಿಂದ ಗ್ರಾಮಗಳಲ್ಲಿ ನೀರು ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದ್ದು, ನಿತ್ಯದ ಬಳಕೆಗೆ ನೀರಿಲ್ಲದೆ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಹಬ್ಬದ ದಿನಗಳಲ್ಲಿಯೂ ಕುಡಿಯುವ ನೀರಿನ ಪರ್ಯಾಯ ವ್ಯವಸ್ಥೆ ಮಾಡದಿರುವುದರಿಂದ ಮಹಿಳೆಯರು ಹಾಗೂ ಕುಟುಂಬಗಳು ದೂರದ ಬಾವಿಗಳಿಂದ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ಸಮಸ್ಯೆಯನ್ನು ತಂದಿದ್ದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಇದೇ ವೇಳೆ ಬಾಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಅವರ ಕಾರ್ಯವೈಖರಿ ಬಗ್ಗೆಯೂ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಮಹಿಳೆಯರು, ಗ್ರಾಮದಲ್ಲಿ ಹೆಚ್ಚಿನವರು ಕಡುಬಡವರು ಹಾಗೂ ದಿನಗೂಲಿ ಕಾರ್ಮಿಕರಾಗಿದ್ದು, ಕೆಲಸದ ನಡುವೆಯೇ ದೂರದ ಪ್ರದೇಶಗಳಿಗೆ ತೆರಳಿ ನೀರು ತರುವಂತಾಗಿದೆ. ಹಬ್ಬದ ದಿನಗಳಲ್ಲಿಯೂ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ಕೆಟ್ಟುಹೋಗಿರುವ ಮೋಟಾರ್‌ನ್ನು ದುರಸ್ತಿಪಡಿಸಿ ಅಥವಾ ಹೊಸ ಮೋಟಾರ್ ಅಳವಡಿಸಿ ನಿಯಮಿತ ಕುಡಿಯುವ ನೀರಿನ ಸರಬರಾಜು ಆರಂಭಿಸಬೇಕು. ಇಲ್ಲವಾದರೆ ಬಾಳೂರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಯುವ ಮುಖಂಡರಾದ ವಿನಯ್ ಬಾಳೂರು, ಅರುಣ್ ಜಿ., ಮಧು, ರವಿ, ಜಯಪ್ಪ ಸೇರಿದಂತೆ ಕಮಲಮ್ಮ, ಸರೋಜಮ್ಮ, ಸುಮಾ ಹಾಗೂ ಬಾಳೂರು ಗ್ರಾಮದ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.