ರಿಪ್ಪನ್ಪೇಟೆ ಶ್ರೀಸಿದ್ದಿವಿನಾಯಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿ ಡಿ.ಈ. ಮಧುಸೂದನ್ ಆಯ್ಕೆ
D.E. Madhusudan has been appointed as the new President of the historic Sri Siddhivinayaka Temple Management Committee in Ripponpet. The new 9-member committee will serve for the next three years.
ರಿಪ್ಪನ್ಪೇಟೆ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಸಿದ್ದಿವಿನಾಯಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಡಿ.ಈ. ಮಧುಸೂದನ್ ಆಯ್ಕೆಯಾಗಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಈ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯನ್ನು ಮುಂದಿನ ಮೂರು ವರ್ಷದ ಅವಧಿಗೆ ರಚಿಸಲಾಗಿದ್ದು, ಹೊಸ ಸಮಿತಿಯ ಸದಸ್ಯರ ವಿವರವನ್ನು ಹೊಸನಗರ ತಹಸೀಲ್ದಾರ್ ಕಚೇರಿ ಪ್ರಕಟಿಸಿದೆ.
ಪ್ರಕಟಣೆಯ ಪ್ರಕಾರ, ಸಾಮಾನ್ಯ ವರ್ಗದಿಂದ ರವೀಂದ್ರ ಕೆರೆಹಳ್ಳಿ, ಶ್ರೀಧರ ಜೆ.ಆರ್., ಗಣೇಶರಾವ್ ಕೆರೆಹಳ್ಳಿ ಹಾಗೂ ಹರೀಶ್ ಎಸ್. ಪ್ರಭು ಅವರನ್ನು ಸದಸ್ಯರಾಗಿ ನೇಮಕ ಮಾಡಲಾಗಿದೆ. ಮಹಿಳಾ ಪ್ರತಿನಿಧಿಗಳಾಗಿ ದೀಪಾ ಎಸ್. ಹೆಬ್ಬಾರ್ ಹಾಗೂ ಧನಲಕ್ಷ್ಮಿ ಆಯ್ಕೆಯಾಗಿದ್ದು, ಪರಿಶಿಷ್ಟ ಜಾತಿ ಪ್ರತಿನಿಧಿಯಾಗಿ ಸ್ವಾಮಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ದೇವಸ್ಥಾನದ ಅರ್ಚಕರಾದ ಶ್ರೀಶಾ ಎಂ.ಎಸ್. ಹೆಗಡೆ ಅವರು ಸಹ ಸಮಿತಿಯ ಸದಸ್ಯರಾಗಿದ್ದು, ಅಧ್ಯಕ್ಷರನ್ನು ಒಳಗೊಂಡಂತೆ ಒಟ್ಟು 9 ಸದಸ್ಯರ ವ್ಯವಸ್ಥಾಪನಾ ಸಮಿತಿ ರಚನೆಯಾಗಿದೆ.
ನೂತನ ಸಮಿತಿಯು ಮುಂದಿನ ಮೂರು ವರ್ಷಗಳ ಕಾಲ ದೇವಸ್ಥಾನದ ಆಡಳಿತ, ಧಾರ್ಮಿಕ ಕಾರ್ಯಕ್ರಮಗಳ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಮುನ್ನಡೆಸಲಿದೆ.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಡಿ.ಈ. ಮಧುಸೂದನ್ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿ “ನಮ್ಮ ಮೇಲೆ ವಿಶ್ವಾಸವಿಟ್ಟು ಈ ಮಹತ್ವದ ಜವಾಬ್ದಾರಿಯನ್ನು ನೀಡಿರುವ ಶಾಸಕ ಬೇಳೂರು ಗೋಪಾಲಕೃಷ್ಣ ಅವರಿಗೆ ಸಮಿತಿಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು. ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು, ಭಕ್ತರ ಸಹಕಾರದೊಂದಿಗೆ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದು ಅವರು ಹೇಳಿದರು.
ದೇವಸ್ಥಾನದ ಅಭಿವೃದ್ಧಿ, ಮೂಲಸೌಕರ್ಯಗಳ ವೃದ್ಧಿ ಹಾಗೂ ಭಕ್ತರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಹೊಸ ಸಮಿತಿ ಕಾರ್ಯನಿರ್ವಹಿಸಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.