w
Headlines
Home » ಹೈಕೋರ್ಟ್ ಪೀಠಕ್ಕಾಗಿ ಶಿವಮೊಗ್ಗದ ಒಗ್ಗಟ್ಟು; ಮುಖ್ಯಮಂತ್ರಿ ಎದುರು ಬೇಡಿಕೆ ಮಂಡಿಸಿದ ಜನಪ್ರತಿನಿಧಿಗಳು

ಹೈಕೋರ್ಟ್ ಪೀಠಕ್ಕಾಗಿ ಶಿವಮೊಗ್ಗದ ಒಗ್ಗಟ್ಟು; ಮುಖ್ಯಮಂತ್ರಿ ಎದುರು ಬೇಡಿಕೆ ಮಂಡಿಸಿದ ಜನಪ್ರತಿನಿಧಿಗಳು

IMG 20260624

ಹೈಕೋರ್ಟ್ ಪೀಠಕ್ಕಾಗಿ ಶಿವಮೊಗ್ಗದ ಒಗ್ಗಟ್ಟು; ಮುಖ್ಯಮಂತ್ರಿ ಎದುರು ಬೇಡಿಕೆ ಮಂಡಿಸಿದ ಜನಪ್ರತಿನಿಧಿಗಳು

Shivamogga MP B.Y. Raghavendra led a delegation to meet Chief Minister D.K. Shivakumar, urging the establishment of a High Court Circuit Bench in Shivamogga and immediate correction of crop insurance compensation anomalies affecting farmers.

ಬೆಂಗಳೂರು, ಜೂನ್ 24: ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ನೇತೃತ್ವದ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ವಕೀಲರ ಸಂಘಗಳ ಪ್ರತಿನಿಧಿಗಳ ನಿಯೋಗವು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿತು.

ಈ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಗೆ ಸಂಬಂಧಿಸಿದಂತೆ ಜಿಲ್ಲೆಯ ಕಾನೂನು ಸಮುದಾಯ ಮತ್ತು ಸಾರ್ವಜನಿಕರ ದೀರ್ಘಕಾಲದ ಬೇಡಿಕೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ನಿಯೋಗ, ನ್ಯಾಯಾಂಗ ಸೇವೆಗಳನ್ನು ಜನರ ಹತ್ತಿರಕ್ಕೆ ತರುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿತು.

ನಿಯೋಗದಲ್ಲಿ ಶಿವಮೊಗ್ಗ ಶಾಸಕ ಚನ್ನಬಸಪ್ಪ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ ಹಾಗೂ ಅರುಣ್ ಡಿ.ಎಸ್., ಶಿವಮೊಗ್ಗ, ಸಾಗರ ಹಾಗೂ ಶಿಕಾರಿಪುರ ವಕೀಲರ ಸಂಘಗಳ ಪದಾಧಿಕಾರಿಗಳು ಮತ್ತು ಹಿರಿಯ ವಕೀಲರು ಭಾಗವಹಿಸಿದ್ದರು.

ಶಿವಮೊಗ್ಗವು ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಪ್ರಮುಖ ಆಡಳಿತ, ಶಿಕ್ಷಣ ಮತ್ತು ವಾಣಿಜ್ಯ ಕೇಂದ್ರವಾಗಿದ್ದು, ಉತ್ತಮ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ಹೀಗಾಗಿ ಶಿವಮೊಗ್ಗದಲ್ಲಿ ಹೈಕೋರ್ಟ್ ಸರ್ಕ್ಯೂಟ್ ಪೀಠ ಸ್ಥಾಪನೆಯಿಂದ ಶಿವಮೊಗ್ಗ ಮಾತ್ರವಲ್ಲದೆ ಚಿಕ್ಕಮಗಳೂರು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಸಾರ್ವಜನಿಕರಿಗೂ ನ್ಯಾಯಾಂಗ ಸೇವೆಗಳನ್ನು ಸುಲಭವಾಗಿ ಪಡೆಯಲು ಅನುಕೂಲವಾಗಲಿದೆ ಎಂದು ಸಂಸದ ರಾಘವೇಂದ್ರ ವಿವರಿಸಿದರು.

ಸರ್ಕ್ಯೂಟ್ ಪೀಠ ಸ್ಥಾಪನೆಯಾಗುವವರೆಗೆ ಶಿವಮೊಗ್ಗ ಜಿಲ್ಲೆಯನ್ನು ಬೆಂಗಳೂರಿನ ಹೈಕೋರ್ಟ್ ಪ್ರಧಾನ ಪೀಠದ ವ್ಯಾಪ್ತಿಯಲ್ಲಿಯೇ ಮುಂದುವರಿಸಬೇಕು ಎಂದು ಸಂಸದರು ಒತ್ತಾಯಿಸಿದರು. ಪಶ್ಚಿಮ ಘಟ್ಟ ಪ್ರದೇಶದ ಭೌಗೋಳಿಕ ಸವಾಲುಗಳು ಹಾಗೂ ಮಳೆಗಾಲದಲ್ಲಿ ಎದುರಾಗುವ ಸಂಚಾರ ಅಡಚಣೆಗಳನ್ನು ಗಮನದಲ್ಲಿಟ್ಟುಕೊಂಡು ಶಿವಮೊಗ್ಗವನ್ನು ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಸೇರಿಸಬಾರದು ಎಂದು ಅವರು ಮನವಿ ಮಾಡಿದರು.

ಇದೇ ವೇಳೆ, 2024-25ನೇ ಸಾಲಿನ ಪುನರ್ ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (R-WBCIS) ಅಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ರೈತರಿಗೆ ನೀಡಲಾದ ಪರಿಹಾರ ಮೊತ್ತದಲ್ಲಿನ ವ್ಯತ್ಯಾಸಗಳ ವಿಚಾರವನ್ನೂ ಸಂಸದರು ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಟೆಲಿಮೆಟ್ರಿಕ್ ಮಳೆ ಮಾಪಕಗಳು ಮತ್ತು ಹವಾಮಾನ ಕೇಂದ್ರಗಳ ಅಸಮರ್ಪಕ ನಿರ್ವಹಣೆಯಿಂದ ಒಂದೇ ರೀತಿಯ ಹವಾಮಾನ ಪರಿಸ್ಥಿತಿಯನ್ನು ಎದುರಿಸಿದ ರೈತರಿಗೆ ವಿಭಿನ್ನ ಪ್ರಮಾಣದ ಪರಿಹಾರ ದೊರೆತಿದ್ದು, ಇದರಿಂದ ರೈತರಲ್ಲಿ ವ್ಯಾಪಕ ಅಸಮಾಧಾನ ಉಂಟಾಗಿದೆ ಎಂದು ಅವರು ತಿಳಿಸಿದರು.

ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವನೆ ಹಲವು ತಿಂಗಳುಗಳಿಂದ ಸರ್ಕಾರದ ಮಟ್ಟದಲ್ಲಿ ಬಾಕಿಯಿದ್ದು, ಅದನ್ನು ತ್ವರಿತವಾಗಿ ಪರಿಶೀಲಿಸಿ ಪರಿಹಾರ ವಿತರಣೆಯಲ್ಲಿನ ವೈಪರೀತ್ಯಗಳನ್ನು ಸರಿಪಡಿಸಿ ಸಂತ್ರಸ್ತ ರೈತರಿಗೆ ನ್ಯಾಯಯುತ ಪರಿಹಾರ ನೀಡುವಂತೆ ಸಂಸದ ರಾಘವೇಂದ್ರ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.