Headlines

ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತಿದ್ದ ಮೂವರು ಯುವಕರು ಪೊಲೀಸರ ವಶಕ್ಕೆ – ಸಾರ್ವಜನಿಕರಿಂದ ಧರ್ಮಧೇಟು!

ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತಿದ್ದ ಮೂವರು ಯುವಕರು ಪೊಲೀಸರ ವಶಕ್ಕೆ – ಸಾರ್ವಜನಿಕರಿಂದ ಧರ್ಮಧೇಟು!

Three youths wearing burqas were detained by Shivamogga police after locals grew suspicious of their movements. Investigation revealed they were allegedly sent by an undertrial prisoner to threaten his wife. Two cases have been registered.

ಶಿವಮೊಗ್ಗ, ಜೂನ್ 11: ಬುರ್ಖಾ ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರು ಯುವಕರನ್ನು ಸಾರ್ವಜನಿಕರು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಶಿವಮೊಗ್ಗ ನಗರದ ಕೆ.ಆರ್. ಪುರಂ ರಸ್ತೆಯಲ್ಲಿ ನಡೆದಿದೆ. ಪ್ರಕರಣದ ಹಿಂದೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯೊಬ್ಬನ ಕೈವಾಡವಿರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಮಾಹಿತಿಯ ಪ್ರಕಾರ, ಕೇಂದ್ರ ಕಾರಾಗೃಹದಲ್ಲಿರುವ ಕೈದಿಯೊಬ್ಬ ತನ್ನನ್ನು ಭೇಟಿಯಾಗಲು ಪತ್ನಿ ಬರುತ್ತಿಲ್ಲ ಹಾಗೂ ಖರ್ಚಿಗೆ ಹಣ ನೀಡುತ್ತಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದನು. ಈ ಹಿನ್ನೆಲೆಯಲ್ಲಿ ತನ್ನ ಪತ್ನಿಗೆ ಬೆದರಿಕೆ ಹಾಕುವ ಉದ್ದೇಶದಿಂದ ಪರಿಚಯವಿದ್ದ ನಾಲ್ವರು ಯುವಕರನ್ನು ಕಳುಹಿಸಿದ್ದಾನೆ ಎನ್ನಲಾಗಿದೆ.

ಆರೋಪಿಗಳು ಮಹಿಳೆಯ ಮನೆ ಬಳಿ ಅನುಮಾನ ಮೂಡದಂತೆ ಬುರ್ಖಾ ಧರಿಸಿಕೊಂಡು ತೆರಳಿದ್ದರು. ಆದರೆ ಅವರ ಚಲನವಲನ ಗಮನಿಸಿದ ಸ್ಥಳೀಯ ನಿವಾಸಿಗಳು ಅನುಮಾನಗೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅವರು ಮಹಿಳೆಯರಲ್ಲ ಎಂಬುದು ಬಹಿರಂಗವಾಗಿದೆ.

ಇದರಿಂದ ಮತ್ತಷ್ಟು ಅನುಮಾನಗೊಂಡ ಸಾರ್ವಜನಿಕರು ಯುವಕರನ್ನು ಹಿಡಿದು ಪ್ರಶ್ನಿಸಿದ್ದು, ಈ ಸಂದರ್ಭ ಒಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಉಳಿದ ಮೂವರನ್ನು ಸ್ಥಳಕ್ಕೆ ಬಂದ ದೊಡ್ಡಪೇಟೆ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಚಾರಣೆ ವೇಳೆ, ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಯ ಸೂಚನೆಯಂತೆ ಆತನ ಪತ್ನಿಗೆ ಬೆದರಿಕೆ ಹಾಕಲು ಬಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

About The Author