ಭಾರಿ ಗಾಳಿ ಮಳೆ – ಹಾರಿ ಹೋದ ಸರ್ಕಾರಿ ಪಿಯು ಕಾಲೇಜಿನ ಮೇಲ್ಚಾವಣಿ , ತಪ್ಪಿದ ಭಾರಿ ಅನಾಹುತ
Heavy rain and strong winds caused severe damage in Ripponpet as the roof of the Government PU College auditorium was blown away and fell onto Kerehalli Road. Fortunately, no casualties were reported.
ರಿಪ್ಪನ್‌ಪೇಟೆ : ಪಟ್ಟಣದಲ್ಲಿ ಸಂಜೆ ಸುರಿದ ಭಾರಿ ಗಾಳಿ ಮಳೆ ಅನಾಹುತಕ್ಕೆ ಕಾರಣವಾಗಿದ್ದು, ಸರ್ಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದ ಮೇಲ್ಚಾವಣಿ ಸಂಪೂರ್ಣವಾಗಿ ಕಿತ್ತುಹಾರಿದ ಘಟನೆ ನಡೆದಿದೆ. ಭಾರೀ ಗಾಳಿಯ ತೀವ್ರತೆಗೆ ಸಭಾಂಗಣದ ಮೇಲ್ಚಾವಣಿಗೆ ಅಳವಡಿಸಲಾಗಿದ್ದ ಶೀಟ್‌ಗಳು ಹಾಗೂ ಕಬ್ಬಿಣದ ಆಂಗಲರ್‌ಗಳು ಹಾರಿ ಹೋಗಿ ಕೆರೆಹಳ್ಳಿ ರಸ್ತೆಯ ಮೇಲೆ ಬಿದ್ದಿವೆ.
ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮೇಲ್ಚಾವಣಿಯ ಅವಶೇಷಗಳು ರಸ್ತೆಯ ಮಧ್ಯೆ ಬಿದ್ದಿದ್ದರಿಂದ ಸಂಚಾರಕ್ಕೂ ಅಡಚಣೆ ಉಂಟಾಯಿತು. ಆದರೆ ಘಟನೆ ಸಂಭವಿಸಿದ ವೇಳೆಯಲ್ಲಿ ರಸ್ತೆಯಲ್ಲಿ ಸಾರ್ವಜನಿಕರು ಅಥವಾ ವಾಹನ ಸಂಚಾರ ಇಲ್ಲದಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸದೇ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ವಿಷಯ ತಿಳಿದ ಶಾಸಕ ಬೇಳೂರು ಗೋಪಾಲಕೃಷ್ಣ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿ, ರಸ್ತೆಗೆ ಬಿದ್ದಿರುವ ಅವಶೇಷಗಳನ್ನು ತಕ್ಷಣ ತೆರವುಗೊಳಿಸುವಂತೆ ಹಾಗೂ ಕಾಲೇಜಿನ ಸಭಾಂಗಣದ ಮೇಲ್ಚಾವಣಿ ದುರಸ್ತಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಘಟನಾ ಸ್ಥಳದಲ್ಲಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯ ಆಸೀಫ್ ಭಾಷಾ, ನಿರೂಪ್ ಕುಮಾರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಜಿ.ಆರ್. ಗೋಪಾಲಕೃಷ್ಣ, ಗ್ರಾಮ ಪಂಚಾಯತ್ ಸಿಬ್ಬಂದಿ ನಾಗೇಶ್ ಮೋರೇ ಸೇರಿದಂತೆ ಹಲವರು ಇದ್ದರು.
ಭಾರಿ ಗಾಳಿ ಮತ್ತು ಮಳೆಯ ಪರಿಣಾಮ ಪಟ್ಟಣದ ವಿವಿಧ ಭಾಗಗಳಲ್ಲಿ ಮರಗಳು ಉರುಳಿರುವುದು ಹಾಗೂ ವಿದ್ಯುತ್ ವ್ಯತ್ಯಯವೂ ಸಂಭವಿಸಿರುವ ಬಗ್ಗೆ ವರದಿಯಾಗಿದೆ.