ಎಸ್ಸೆಸ್ಸೆಲ್ಸಿ ಫಲಿತಾಂಶ: ಹೊಸನಗರ ತಾಲೂಕಿನ ಸರ್ಕಾರಿ ಶಾಲೆಗಳ ಐತಿಹಾಸಿಕ ಸಾಧನೆ, ಶೇ. 99ರಷ್ಟು ತೇರ್ಗಡೆ
— 14 ಶಾಲೆಗಳಲ್ಲಿ ನೂರಕ್ಕೆ ನೂರು ಫಲಿತಾಂಶ | ಬಿಇಒ ಗಣೇಶ್ ಹಾಗೂ ಶಿಕ್ಷಕರ ಶ್ರಮಕ್ಕೆ ಒಲಿದ ಯಶಸ್ಸು
SSLC Result 2025-26: The ತಾಲೂಕ reports an impressive 99% pass percentage with 806 students passing out of 814. Several schools achieved 100% results, highlighting strong academic performance.
ಹೊಸನಗರ: 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳು ಶೇ. 99ರಷ್ಟು ಅತ್ಯುತ್ತಮ ಫಲಿತಾಂಶ ದಾಖಲಿಸುವ ಮೂಲಕ ಶೈಕ್ಷಣಿಕ ವಲಯದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿವೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪರಿಶ್ರಮಕ್ಕೆ ಈ ಬಾರಿಯ ಫಲಿತಾಂಶ ಕನ್ನಡಿಯಾಗಿದೆ.
ತಾಲೂಕಿನ ಒಟ್ಟು 19 ಸರ್ಕಾರಿ ಪ್ರೌಢಶಾಲೆಗಳಿಂದ 814 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಈ ಪೈಕಿ ಬರೋಬ್ಬರಿ 806 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಸಾಧನೆ ಮೆರೆದಿದ್ದು, ಕೇವಲ 8 ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ.
ಶತಪ್ರತಿಶತ ಸಾಧನೆ ಮೆರೆದ ಶಾಲೆಗಳು:
ತಾಲೂಕಿನ ಬಹುತೇಕ ಶಾಲೆಗಳು ಶೇ. 100ರಷ್ಟು ಫಲಿತಾಂಶ ದಾಖಲಿಸಿರುವುದು ವಿಶೇಷ. ಜಯನಗರ, ಬೆಳ್ಳೂರು, ಹೊಸನಾಡು, ಸೊನಲೆ, ಕಾರಗಣಗಿರು, ನಗರ, ಹೆದ್ದಾರಿಪುರ, ಕಾನುಗೋಡು, ಮಸಗಲ್ಲಿ, ಕೋಡೂರು, ನಿಟ್ಟೂರು, ಸಂಪೆಕಟ್ಟೆ, ಹೊಸನಗರ ಹಾಗೂ ಚಿಕ್ಕಜೇನಿ ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಪಡೆದು ಬೀಗಿವೆ.
ಉಳಿದಂತೆ ಮಾರುತಿಪುರ (ಶೇ. 99), ರಿಪ್ಪನ್ಪೇಟೆ (ಶೇ. 98), ಅಮೃತ-ಗರ್ತಿಕೆರೆ (ಶೇ. 97.14), ಯಡೂರು (ಶೇ. 97) ಹಾಗೂ ಅರಸಾಳು (ಶೇ. 92) ಶಾಲೆಗಳು ಕೂಡ ಅತ್ಯುತ್ತಮ ಪ್ರಗತಿ ಸಾಧಿಸಿವೆ.
ಸಾಧನೆಗೆ ಪ್ರಶಂಸೆಯ ಮಹಾಪೂರ:
ರಿಪ್ಪನ್ಪೇಟೆ ಹಾಗೂ ಹೊಸನಗರ ಸಮೂಹ (ಕ್ಲಸ್ಟರ್) ಮಟ್ಟದಲ್ಲಿ ಈ ಅತ್ಯುತ್ತಮ ಶೈಕ್ಷಣಿಕ ಪ್ರಗತಿ ಕಂಡುಬಂದಿದೆ. ವಿದ್ಯಾರ್ಥಿಗಳ ಕಠಿಣ ಪರಿಶ್ರಮ ಹಾಗೂ ಶಿಕ್ಷಕರ ಮಾರ್ಗದರ್ಶನ ಈ ಯಶಸ್ಸಿಗೆ ಕಾರಣವಾಗಿದೆ. ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಲ್ಲಿ ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಗಣೇಶ್ ,ಶಿಕ್ಷಣ ಸಂಯೋಜನಾಧಿಕಾರಿಗಳಾದ ಕರಿಬಸಪ್ಪ , ಸುಮಾರಾಣಿ ಹಾಗೂ ರಾಜೇಂದ್ರ BRP ಅವಿರತ ಶ್ರಮಕ್ಕೆ ಈ ಮೂಲಕ ಯಶಸ್ಸು ಲಭಿಸಿದ್ದು, ಮುಂದಿನ ವರ್ಷಗಳಲ್ಲಿ ಇನ್ನಷ್ಟು ಉತ್ತಮ ಫಲಿತಾಂಶದ ನಿರೀಕ್ಷೆ ವ್ಯಕ್ತವಾಗಿದೆ.
ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಈ ಅಮೋಘ ಯಶಸ್ಸಿಗೆ ಶ್ರಮಿಸಿದ ಎಲ್ಲಾ ಶಿಕ್ಷಕ ಮತ್ತು ಪೋಷಕ ವೃಂದಕ್ಕೆ ‘ಪೋಸ್ಟ್ ಮ್ಯಾನ್ ನ್ಯೂಸ್’ ಬಳಗದ ವತಿಯಿಂದ ಹಾರ್ದಿಕ ಅಭಿನಂದನೆಗಳು ಸಲ್ಲಿಕೆಯಾಗಿವೆ.
ಈ ಸಂಧರ್ಭದಲ್ಲಿ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾರ್ಥಿಗಳ ಆಸಕ್ತಿ ಶಿಕ್ಷಕರುಗಳ ಅವಿರತ ಪರಿಶ್ರಮ , ಪೋಷಕರ ಹಾಗೂ ಶಾಲಾಭಿವೃದ್ದಿ ಸಮಿತಿಯವರ ಸಹಕಾರವೇ ಇಂತಹ ಐತಿಹಾಸಿಕ ಫಲಿತಾಂಶಕ್ಕೆ ಕಾರಣವಾಗಿದ್ದೂ ಈ ಸಂಧರ್ಭದಲ್ಲಿ ಆವರೆಲ್ಲಾಗಿಗೂ ವಿಶೇಷವಾದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.
