ಜೋಗದ ಕೆಪಿಸಿ ಪ್ರೌಢಶಾಲೆಗೆ ಶೇ.100 ಫಲಿತಾಂಶ – ರೋಸ್ನಾ ರಿಂಷಾ 96% ಅಂಕಗಳೊಂದಿಗೆ ಪ್ರಥಮ ಸ್ಥಾನ
Rosna Rinsha secures 96% marks and tops KPC High School, Jog, as the school achieves 100% SSLC result for the first time in its history.
ಜೋಗ: ಈ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜೋಗದ ಕೆಪಿಸಿ ಪ್ರೌಢಶಾಲೆ ಶೇ.100 ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ. ಶಾಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಸ್ಥಳೀಯರಲ್ಲಿ ಸಂತಸ ಮೂಡಿಸಿದೆ.

ಈ ಸಾಧನೆಯಲ್ಲಿ ವಿದ್ಯಾರ್ಥಿನಿ ರೋಸ್ನಾ ರಿಂಷಾ ವಿಶೇಷವಾಗಿ ಮಿಂಚಿದ್ದು, 625ಕ್ಕೆ 596 ಅಂಕಗಳನ್ನು ಪಡೆದು 96% ಸಾಧನೆ ಮಾಡುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ. ಕನ್ನಡದಲ್ಲಿ 122, ಇಂಗ್ಲಿಷ್‌ನಲ್ಲಿ 96, ಹಿಂದಿಯಲ್ಲಿ 99, ಗಣಿತದಲ್ಲಿ 94, ವಿಜ್ಞಾನದಲ್ಲಿ 86 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕಗಳನ್ನು ಗಳಿಸಿರುವುದು ಆಕೆಯ ಪರಿಶ್ರಮಕ್ಕೆ ಸಾಕ್ಷಿಯಾಗಿದೆ.
ಕಾರ್ಗಲ್ ಗ್ರಾಮದ ನಿವಾಸಿಗಳಾದ ನಾಸೀರ್ ಹಾಗೂ ಮೈನಾ ದಂಪತಿಗಳ ಪುತ್ರಿಯಾದ ರೋಸ್ನಾ ರಿಂಷಾ ತನ್ನ ಸಾಧನೆಯ ಮೂಲಕ ಕುಟುಂಬಕ್ಕೂ, ಶಾಲೆಗೂ ಹಾಗೂ ಊರಿಗೂ ಕೀರ್ತಿ ತಂದಿದ್ದಾಳೆ. ಆಕೆಯ ಈ ಸಾಧನೆಗೆ ಶಿಕ್ಷಕರು ಹಾಗೂ ಪೋಷಕರು ಅಭಿನಂದನೆ ವ್ಯಕ್ತಪಡಿಸಿದ್ದಾರೆ.
ಐವತ್ತಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಕೆಪಿಸಿ ಪ್ರೌಢಶಾಲೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಾ ಬಂದಿದೆ. ದುಬಾರಿ ಶುಲ್ಕಗಳನ್ನು ಕಟ್ಟಿಕೊಂಡು ಮಕ್ಕಳನ್ನು ಸಾಗರ, ಶಿವಮೊಗ್ಗ ಅಥವಾ ದಕ್ಷಿಣ ಕನ್ನಡ ಜಿಲ್ಲೆಗಳ ಕಡೆ ಕಳುಹಿಸುವ ಬದಲು, ಸ್ಥಳೀಯ ಶಾಲೆಯಲ್ಲಿಯೇ ಉತ್ತಮ ಫಲಿತಾಂಶ ದೊರೆಯಬಹುದು ಎಂಬುದನ್ನು ಈ ಸಾಧನೆ ತೋರಿಸಿದೆ.
ಶಾಲೆಯ ಸಾಧನೆಗೆ ಶಿಕ್ಷಕ ವೃಂದ, ಪೋಷಕರು ಹಾಗೂ ಸ್ಥಳೀಯರ ಸಹಕಾರವೇ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುವ ಮೂಲಕ ಶಾಲೆಯ ಕೀರ್ತಿಯನ್ನು ಹೆಚ್ಚಿಸಲಿ ಎಂಬ ಆಶಯ ವ್ಯಕ್ತವಾಗಿದೆ.
