ಮೇ 1 ರಿಂದ 4 ರವರೆಗೆ ಐತಿಹಾಸಿಕ ನಗರ ದರ್ಗಾದ 52ನೇ ಉರೂಸ್ ಸಂಭ್ರಮ – ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಉರೂಸ್ ಆಚರಣೆಗೆ ಒಮ್ಮತದ ನಿರ್ಧಾರ
The historic Nagar Dargah (Hosanagar) will host its 52nd Urus from May 1-4, 2026. Forgetting previous differences, the united community prepares for a grand Sandal procession and massive public feeding (Annasantarpana). Read full details.”
ಹೊಸನಗರ : ತಾಲೂಕಿನ ನಗರ ಸಮೀಪದ ಮುಡಗೊಪ್ಪ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಹಾಗೂ ಭಾವೈಕ್ಯತೆಯ ಸಂಕೇತವಾಗಿರುವ ಹಜರತ್ ಶೇಖ್ ಅಕ್ಬರ್ ಅನ್ವರ್ ಮಾಷುಂಶಾ ವಲಿಯುಲ್ಲಾ ದರ್ಗಾದ 52ನೇ ವರ್ಷದ ಉರೂಸ್ ಮಹೋತ್ಸವವನ್ನು ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ. ವಿಶೇಷವೆಂದರೆ, ಈ ಹಿಂದೆ ಇದ್ದಂತಹ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಸಂಪೂರ್ಣವಾಗಿ ಮರೆತು, ಇಡೀ ತಾಲೂಕಿನ ಸಮಸ್ತ ಮುಸ್ಲಿಂ ಬಾಂಧವರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ನಗರ ಸುಲ್ತಾನ್ ಜುಮ್ಮಾ ಮಸೀದಿ ಆಡಳಿತ ಸಮಿತಿ, ದರ್ಗಾ ಸಮಿತಿ ಹಾಗೂ ಉರೂಸ್ ಸಮಿತಿಯ ಪದಾಧಿಕಾರಿಗಳು ಜಂಟಿಯಾಗಿ ಸಭೆ ಸೇರಿ, ಈ ಬಾರಿಯ ಉರೂಸ್ ಕಾರ್ಯಕ್ರಮವನ್ನು ಒಮ್ಮತದಿಂದ ನಡೆಸಲು ನಿರ್ಧರಿಸಿದ್ದಾರೆ. ಉರೂಸ್ ಕಮಿಟಿ ಅಧ್ಯಕ್ಷರಾದ ವಿನಯ ಉಡುಪ ಹಾಗೂ ಜಿ. ಮೊಹಮ್ಮದ್ ಸಾಬ್ ರವರ ಸೂಕ್ತ ಮಾರ್ಗದರ್ಶನದಲ್ಲಿ ಹಾಗೂ ಸುಲ್ತಾನ್ ಜುಮ್ಮಾ ಮಸೀದಿ ಆಡಳಿತ ಸಮಿತಿಯ ನೇತೃತ್ವದಲ್ಲಿ ಈ ಬಾರಿಯ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ಹಾಗೂ ಸಡಗರದಿಂದ ನೆರವೇರಲಿವೆ.
ನಾಲ್ಕು ದಿನಗಳ ಧಾರ್ಮಿಕ ಕಾರ್ಯಕ್ರಮ:
ಈ ಬಾರಿಯ ಉರೂಸ್ ಕಾರ್ಯಕ್ರಮವು ದಿನಾಂಕ 01-05-2026 ರಿಂದ ಆರಂಭವಾಗಿ 04-05-2026 ರವರೆಗೆ ಬರೋಬ್ಬರಿ ನಾಲ್ಕು ದಿನಗಳ ಕಾಲ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ. ಮೇ 1 ರಂದು ಪ್ರಖ್ಯಾತ ಧರ್ಮಗುರುಗಳಾದ ಸಿರಾಜ್ ತಂಗಲ್ ಅವರು ಉರೂಸ್ ಮಹೋತ್ಸವಕ್ಕೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.
ಉರೂಸ್ನ ಪ್ರಮುಖ ಆಕರ್ಷಣೆಯಾದ ಪವಿತ್ರ ‘ಸಂದಲ್’ ಮೆರವಣಿಗೆ ಹಾಗೂ ‘ನಾಥ್’ ಕಾರ್ಯಕ್ರಮವು ಮೇ 3ನೇ ತಾರೀಕು ಭಾನುವಾರ ಬಹಳ ವಿಜೃಂಭಣೆಯಿಂದ ಜರುಗಲಿದೆ. ಕಾರ್ಯಕ್ರಮದ ಅಂತಿಮ ದಿನವಾದ ಮೇ 4ನೇ ತಾರೀಕು ಸೋಮವಾರ ಮಧ್ಯಾಹ್ನ ಸರ್ವಧರ್ಮೀಯರಿಗಾಗಿ ಬೃಹತ್ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಧಾರ್ಮಿಕ ಸಮ್ಮೇಳನದಲ್ಲಿ ಧರ್ಮಗುರುಗಳು, ಹಲವಾರು ಗಣ್ಯರು ಹಾಗೂ ಸ್ಥಳೀಯ ನಾಯಕರುಗಳು ಭಾಗವಹಿಸಲಿದ್ದಾರೆ.
ಜಾತಿ, ಧರ್ಮದ ಭೇದಭಾವವಿಲ್ಲದೆ ಎಲ್ಲಾ ಸರ್ವಧರ್ಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಉರೂಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಮಿತಿ ವತಿಯಿಂದ ಕಳಕಳಿಯ ಮನವಿ ಮಾಡಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಉರೂಸ್ ಕಮಿಟಿಯ ಉಪಾಧ್ಯಕ್ಷ ಹಾಗೂ ನಗರ ಸುಲ್ತಾನ್ ಮಸೀದಿಯ ಅಧ್ಯಕ್ಷ ಹಿದಾಯತ್, ಉರೂಸ್ ಕಮಿಟಿ ಕಾರ್ಯದರ್ಶಿ ಅಯೂಬ್ ನಗರ, ದರ್ಗಾ ಕಮಿಟಿ ಕಾರ್ಯದರ್ಶಿ ಸಾದಿಕ್ ಅಲಿ ಕಚ್ಚಿಗೆಬೈಲು, ಖಜಾಂಚಿ ಇಬ್ರಾಹಿಂ ಹೊಸನಗರ, ಪ್ರಮುಖ ಸದಸ್ಯರಾದ ಅಶ್ರಫ್ ಜಯನಗರ, ಇಸಾಕ್ ಹೊಸನಗರ, ಅಬೂಬಕ್ಕರ್ ನಗರ, ಜಹೀರ್ ನಿಟ್ಟೂರು ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು, ಮುಂಬರುವ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರ ಕೋರಿದರು.