w
Headlines
Home » ಬೈಕ್‌ಗೆ ಬೊಲೆರೊ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

ಬೈಕ್‌ಗೆ ಬೊಲೆರೊ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

IMG 20260213

Two construction workers died on the spot after a Bolero jeep rammed into their motorcycle near Kanivemane village in Shikaripura taluk, Shivamogga district.

ಶಿಕಾರಿಪುರ, ಫೆ.13: ತಾಲ್ಲೂಕಿನ ಕಣಿವೆಮನೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿ, ಬೈಕ್ ಸವಾರರಾದ ಇಬ್ಬರು ಗಾರೆ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ನಡೆದಿದೆ.

ಮೃತರನ್ನು ತಾಲ್ಲೂಕಿನ ಭದ್ರಾಪುರ ಗ್ರಾಮದ ಕಿರಣಕುಮಾರ (40) ಹಾಗೂ ಪಟ್ಟಣದ ಕುಂಬಾರಗುಂಡಿ ನಿವಾಸಿ ಶಿವರಾಜು (42) ಎಂದು ಗುರುತಿಸಲಾಗಿದೆ. ಬೈಕ್ ಹಾಗೂ ಬೊಲೆರೊ ಜೀಪ್ ಎರಡೂ ಶಿಕಾರಿಪುರದತ್ತ ಸಾಗುತ್ತಿದ್ದ ವೇಳೆ ಶಾಂತಿವನ ಸಮೀಪ ಡಿಕ್ಕಿಯಾಗಿದ್ದು, ಅಪಘಾತದ ತೀವ್ರತೆಗೆ ಬೈಕ್ ಬೊಲೆರೊ ಜೀಪ್‌ನ ಅಡಿಗೆ ಸಿಲುಕಿ ಸುಮಾರು 800 ಮೀಟರ್ ದೂರದವರೆಗೂ ರಸ್ತೆ ಮೇಲೆ ಎಳೆದೊಯ್ಯಲಾಗಿದೆ.

ಡಿಕ್ಕಿಯ ಪರಿಣಾಮ ಬೈಕ್ ಸವಾರರು ಇಬ್ಬರೂ ವಾಹನದ ಕೆಳಗೆ ಸಿಲುಕಿದ್ದು, ಸ್ಥಳದಲ್ಲೇ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಅಪಘಾತದ ದೃಶ್ಯ ಅತ್ಯಂತ ಭೀಕರವಾಗಿದ್ದು, ರಸ್ತೆ ತುಂಬಾ ರಕ್ತ ಚೆಲ್ಲಾಡಿರುವುದು ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.

ಮೃತ ಶಿವರಾಜು ಮೂಲತಃ ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ನಿವಾಸಿಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಶಿಕಾರಿಪುರ ಪಟ್ಟಣದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು. ಕಿರಣಕುಮಾರ ಹಾಗೂ ಶಿವರಾಜು ಇಬ್ಬರೂ ಒಂದೇ ಮೇಸ್ತ್ರಿಯ ಬಳಿ ಗಾರೆ ಕೆಲಸ ಮಾಡುತ್ತಿದ್ದ ಕಾರಣ ಆಪ್ತ ಸ್ನೇಹಿತರಾಗಿದ್ದರು. ಉಡುಗಣಿ ಮಾರಿಹಬ್ಬದ ಊಟಕ್ಕೆ ತೆರಳಿ ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಕಿರಣಕುಮಾರ ಪತ್ನಿ, ತಾಯಿ ಹಾಗೂ 12 ವರ್ಷ ಒಳಗಿನ ಮೂರು ಪುತ್ರಿಯರನ್ನು ಅಗಲಿದ್ದಾರೆ. ಶಿವರಾಜು ಪತ್ನಿ ಮತ್ತು 5 ವರ್ಷ ಒಳಗಿನ ಇಬ್ಬರು ಪುತ್ರಿಯರನ್ನು ಬಿಟ್ಟು ತೆರಳಿದ್ದಾರೆ. ಘಟನೆ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.