A mason was brutally murdered in Gajanur near Shivamogga after a drunken brawl. Police suspect the victim’s friends behind the killing. Investigation is underway.
ಗಾಜನೂರಿನಲ್ಲಿ ಗಾರೆ ಮೇಸ್ತ್ರಿ ಹತ್ಯೆ: ಕುಡಿತದ ಜಗಳ ಕಾರಣವೇ!? ಸ್ನೇಹಿತರೇ ಇಟ್ಟರಾ ಮೂಹೂರ್ತ | ಎಸ್ ಪಿ ಹೇಳಿದ್ದೇನು!?
ಶಿವಮೊಗ್ಗ: ತಾಲೂಕಿನ ಗಾಜನೂರುನಲ್ಲಿ ಗಾರೆ ಮೇಸ್ತ್ರಿಯೊಬ್ಬರನ್ನು ಕಲ್ಲಿನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ. ಮೃತನನ್ನು ಹೊಸಮನೆ ನಿವಾಸಿ ಶ್ರೀನಿವಾಸ್ (36) ಎಂದು ಗುರುತಿಸಲಾಗಿದೆ.
ಕಳೆದ ಒಂದು ವರ್ಷದಿಂದ ಗಾಜನೂರಿನಲ್ಲಿ ವಾಸವಿದ್ದ ಶ್ರೀನಿವಾಸ್ ಗಾರೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರು. ಗಾಜನೂರಿನ ಕೃಷಿ ಪತ್ತಿನ ಸಹಕಾರ ಸಂಘದ ಆವರಣದ ಬಳಿ ನಿನ್ನೆ ರಾತ್ರಿ ಈ ಕೃತ್ಯ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕುಡಿತದ ಅಮಲಿನಲ್ಲಿ ನಡೆದ ಜಗಳವೇ ಹತ್ಯೆಗೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣದ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ, “ಪ್ರಾಥಮಿಕ ತನಿಖೆಯ ಪ್ರಕಾರ ಶ್ರೀನಿವಾಸ್ ಅವರು ಇಬ್ಬರು ಸ್ನೇಹಿತರೊಂದಿಗೆ ಕುಳಿತಿದ್ದ ವೇಳೆ ಕುಡಿತದ ವಿಚಾರವಾಗಿ ಜಗಳ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಸ್ನೇಹಿತರೇ ಕಲ್ಲು ಎತ್ತಿ ಹಾಕಿ ಹಾಗೂ ಹರಿತವಾದ ಬ್ಲೇಡ್‌ನಿಂದ ಇರಿದು ಹತ್ಯೆ ಮಾಡಿದ್ದಾರೆ” ಎಂದು ತಿಳಿಸಿದ್ದಾರೆ.
ಮೃತರು ಪ್ರತಿದಿನ ಕುಡಿದು ಕಿರಿಕ್ ಮಾಡುತ್ತಿದ್ದರೆಂಬ ಮಾಹಿತಿಯೂ ಲಭ್ಯವಾಗಿದೆ. ನಿನ್ನೆ ರಾತ್ರಿ ಕೂಡ ಪರಿಚಯದವರೊಂದಿಗೆ ಕಿರಿಕ್ ಮಾಡಿಕೊಂಡ ವೇಳೆ ಆಕ್ರೋಶಗೊಂಡ ಸ್ನೇಹಿತರು ಈ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳಕ್ಕೆ ತುಂಗಾನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಇಬ್ಬರು ಸ್ನೇಹಿತರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.














