Headlines

ಹಾವೇರಿ ಪತ್ರಿಕಾ ಭವನದಲ್ಲಿ ಸಚಿವ ಶಿವಾನಂದ ಪಾಟೀಲರಿಗೆ ಅದ್ಧೂರಿ ಸನ್ಮಾನ | SHIVANANDA PATIL

Haveri District Journalists Association honored Karnataka Minister Shivanand Patil after he donated Rs 5 lakh to the welfare fund and assured drinking water projects for 410+ villages.

ಹಾವೇರಿ ಪತ್ರಿಕಾ ಭವನದಲ್ಲಿ ಸಚಿವ ಶಿವಾನಂದ ಪಾಟೀಲರಿಗೆ ಅದ್ಧೂರಿ ಸನ್ಮಾನ

ಹಾವೇರಿ: ಹಾವೇರಿ ನಗರದ ಪತ್ರಿಕಾ ಭವನದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಪತ್ರಿಕಾ ಭವನಕ್ಕೆ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಸಚಿವರು ಪರಿಶೀಲಿಸಿದರು. ಬಳಿಕ ಪತ್ರಕರ್ತರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ಮೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, ಬರುವ ಬೇಸಿಗೆ ವೇಳೆಗೆ 410ಕ್ಕೂ ಹೆಚ್ಚು ಗ್ರಾಮಗಳ  ಹತ್ತಿರದ  ಹಳ್ಳಿಗಳಿಗೆ ಸೇರಿ 410ಕ್ಕೂ ಅಧಿಕ ಹಳ್ಳಿಗಳಿಗೆ ನೀರಿನ ಸಮಸ್ಯೆ ನೀಗಲಿದೆ ಎಂದು ಭರವಸೆ ನೀಡಿದರು.

“ಹಾವೇರಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾನು ಸಂಪೂರ್ಣ ಬದ್ಧನಾಗಿದ್ದೇನೆ. ಈಗಾಗಲೇ ಪ್ರಾರಂಭಗೊಂಡಿರುವ ಹಾವೇರಿ ಮೆಡಿಕಲ್ ಕಾಲೇಜು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿಯೇ ಮಾದರಿ ಸಂಸ್ಥೆಯಾಗಿ ರೂಪುಗೊಂಡಿದೆ. ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಕೊರತೆ ಇರುವುದನ್ನು ಅರಿತು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಕೆರೆ ತುಂಬಿಸುವ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿದ್ದೇವೆ” ಎಂದು ಹೇಳಿದರು.

Haveri Press Bhavan Felicitation

ರೈತರ ಬಗ್ಗೆ ಅಪಾರ ಕಾಳಜಿ ವ್ಯಕ್ತಪಡಿಸಿದ ಸಚಿವರು, “ಜಿಲ್ಲೆಯ ರೈತರು ಯಾವುದೇ ಕಾರಣಕ್ಕೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಒಂದೇ ಬೆಳೆ ಮೇಲೆ ಅವಲಂಬಿಸದೆ ಎರಡ್ಮೂರು ಬೆಳೆಗಳನ್ನು ಬೆಳೆಯಬೇಕು. ಒಂದಿಲ್ಲೊಂದು ಬೆಳೆ ಕೈ ಹಿಡಿಯುತ್ತದೆ. ರೈತ ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದಿರುವುದು ಈ ದೇಶದ ದೊಡ್ಡ ದುರಂತ” ಎಂದು ಕಳವಳ ವ್ಯಕ್ತಪಡಿಸಿದರು.

ಹಿಂದೆ 35 ಕೋಟಿ ಜನ ಮಾತ್ರ ಇದ್ದಾಗಲೂ ದೇಶಕ್ಕೆ ಊಟ ಹಾಕುತ್ತಿದ್ದ ರೈತರು, ಇಂದು 140 ಕೋಟಿ ಜನರಿಗೆ ಆಹಾರ ನೀಡುವ ಶಕ್ತಿ ಹೊಂದಿದ್ದಾರೆ. ಆದರೂ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಕುರುವತ್ತೇರ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಹಾವೇರಿ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ, ಆನಂದಸ್ವಾಮಿ ಗಡ್ಡದೇವರಮಠ, ಅಬ್ದುಲ್ ಮುನಾಫ್ ಎರೇಶಿಮಿ, ಸಂಘದ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ರಾಜ್ಯ ಸಮಿತಿ ಸದಸ್ಯ ಪಿ.ಎಂ. ಸತ್ಯಪ್ಪನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿರೇಶ ಮಡ್ಲೂರ, ಖಜಾಂಚಿ ಬಸವರಾಜ ಮರಳಿಹಳ್ಳಿ, ವಿನಾಯಕ ಹುದ್ದಾರ, ಕೇಶಮೂರ್ತಿ ವಿ.ಬಿ., ಮಂಜುನಾಥ ಗುಡಿಸಾಗರ, ಸಂತೋಷ ಮಹಾಂತಶೆಟ್ಟರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಮತ್ತು ಜಿಲ್ಲೆಯ ಹಿರಿಯ ಪತ್ರಕರ್ತರು ಭಾಗವಹಿಸಿದ್ದರು. ಸಂಘದ ಉಪಾಧ್ಯಕ್ಷ ನಾರಾಯಣ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

ಹಾವೇರಿ ಮೆಡಿಕಲ್ ಕಾಲೇಜು ಪ್ರಾರಂಭ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಸಚಿವರ ಶ್ರಮ ಬಹಳಷ್ಟಿದೆ. ಸಚಿವರು ಜಿಲ್ಲೆಯ ಅಭಿವೃದ್ಧಿಗೆ ಬದ್ಧರಾಗಿರುವುದು ನಮ್ಮ ಭಾಗ್ಯ. ಜಿಲ್ಲಾ ಪತ್ರಕರ್ತರ ಸಂಘ ರಾಜಕೀಯೇತರವಾಗಿ, ಅಭಿವೃದ್ಧಿ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿದೆ. ನಾನು ಸಹ ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ 1 ಲಕ್ಷ ರೂ. ಅನುದಾನ ನೀಡುತ್ತೇನೆ.

ಬಸವರಾಜ ಶಿವಣ್ಣನವರ, ಶಾಸಕರು

ಜಿಲ್ಲಾ ಪತ್ರಿಕಾ ಭವನದ ಮೇಲ್ಭಾಗದಲ್ಲಿ ಸಭಾಭವನ ನಿರ್ಮಾಣಕ್ಕೆ ಅನುದಾನ ನೀಡುವ ಕುರಿತು ಜಿಲ್ಲೆಯ ಶಾಸಕರೊಂದಿಗೆ ಚರ್ಚಿಸಿ ಮುಖ್ಯಮಂತ್ರಿಗಳ ಬಳಿ ಪ್ರಸ್ತಾವನೆ ಸಲ್ಲಿಸಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಶಿವಾನಂದ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ

ಜೆ.ಹೆಚ್. ಪಟೇಲ್ ವೃತ್ತದಿಂದ ಎಂಜಿನಿಯರಿಂಗ್ ಕಾಲೇಜುವರೆಗೆ ಹಾಗೂ ವಾಲ್ಮೀಕಿ ಸರ್ಕಲ್‌ನಿಂದ ಬೈಪಾಸ್‌ವರೆಗೆ ರಸ್ತೆ ಅಗಲೀಕರಣ ಮಾಡುವುದು ಸಚಿವರ ಸಂಕಲ್ಪ. ಇದು ಶೀಘ್ರದಲ್ಲೇ ಸಾಕಾರಗೊಳ್ಳಲಿದೆ. ನಾನು ಸಹ ಪತ್ರಕರ್ತರ ಸಂಘದ ನಿಧಿಗೆ 1 ಲಕ್ಷ ರೂ. ದೇಣಿಗೆ ನೀಡುತ್ತೇನೆ.

ಸಂಜೀವಕುಮಾರ ನೀರಲಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ಪತ್ರಿಕಾ ಭವನದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು, ಭವನದ ಮುಂಭಾಗದ ಒತ್ತುವರಿ ಜಾಗ ತೆರವುಗೊಳಿಸಬೇಕು ಹಾಗೂ ಪತ್ರಕರ್ತರಿಗೆ ನಿವೇಶನ ಸೌಲಭ್ಯ ಕಲ್ಪಿಸುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು.

ನಾಗರಾಜ ಕುರುವತ್ತೇರ, ಅಧ್ಯಕ್ಷರು – ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ