2026ರ ಮೊದಲ ಪ್ರಿಪೇರೇಟರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಮಕ್ಕಳ ಭವಿಷ್ಯಕ್ಕೆ ಧಕ್ಕೆಯಾಗಿದೆ. ಶಿಕ್ಷಣ ಇಲಾಖೆಯ ಕಠಿಣ ಕ್ರಮಕ್ಕೆ ಆಗ್ರಹಿಸಿ ಸಾಹಿತಿ ಮೈನಾನಾಸೀರ್ ಕಾರ್ಗಲ್ ಅವರ ಭಾವುಕ ಮನವಿ.
ಒಂದು ನೋವಿನ ಮನವಿ – ಮಕ್ಕಳ ಭವಿಷ್ಯಕ್ಕಾಗಿ..
2026ರ ಮೊದಲ ಪ್ರಿಪೇರೇಟರಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಇಡೀ ರಾಜ್ಯದಲ್ಲಿ ಸೋರಿಕೆಯಾಗಿದೆ ಎಂಬ ಸುದ್ದಿ ಕೇಳಿದ ಕ್ಷಣದಿಂದ ಮನಸ್ಸು ಭಾರವಾಗಿ ಕುಸಿದಿದೆ.
ಇದು ಕೇವಲ ಒಂದು ಸುದ್ದಿ ಅಲ್ಲ…
ಇದು ಸಾವಿರಾರು ಮಕ್ಕಳ ಕನಸುಗಳ ಮೇಲೆ ಬಿದ್ದ ಬಿರುಕು.
ಬೆಳಗ್ಗಿನಿಂದ ರಾತ್ರಿ ತನಕ ಪುಸ್ತಕದ ಮುಂದೆ ಕಣ್ಣೀರು ಹಾಕುತ್ತಾ ಓದುತ್ತಿರುವ ಮಕ್ಕಳು,“ಈ ಪರೀಕ್ಷೆ ನನ್ನ ಬದುಕಿನ ತಿರುವು” ಎಂದು ನಂಬಿಕೊಂಡಿರುವ ಮುಗ್ಧ ಮನಸ್ಸುಗಳು,ಅವರ ಶ್ರಮ, ಅವರ ನಂಬಿಕೆ, ಅವರ ಭವಿಷ್ಯ—ಇವೆಲ್ಲದ ಮೇಲೆಯೇ ಇಂದು ನಿರ್ದಯವಾಗಿ ಕಾಲಿಟ್ಟು ಹೋಗಲಾಗಿದೆ.
ಪ್ರಿಪೇರೇಟರಿ ಪ್ರಶ್ನೆ ಪತ್ರಿಕೆಗಳು ವಾಟ್ಸಾಪ್, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ಗಳಲ್ಲಿ ಮುಕ್ತವಾಗಿ ಸುತ್ತಾಡುತ್ತಿರುವುದು ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ನಡುಗಿಸುತ್ತದೆ.
ಇನ್ನು ಮುಂದೆ ಮಕ್ಕಳು ನಂಬಿಕೆಯಿಂದ ಓದಲು ಸಾಧ್ಯವೇ?
ನ್ಯಾಯವಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಳಿದದೇನು?
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ…ಇವು ಪರೀಕ್ಷೆಗಳಲ್ಲ,
ಇವು ಮಕ್ಕಳ ಜೀವನದ ಅಡಿಗಲ್ಲುಗಳು.
ಆ ಅಡಿಗಲ್ಲುಗಳ ಮೇಲೆ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ವಿಷ ಬಿತ್ತಲಾಗುತ್ತಿದೆ ಎಂಬುದು ಅತ್ಯಂತ ಹೃದಯವಿದ್ರಾವಕ.
ಈ ಕೃತ್ಯ ಮಾಡಿದವರು ಯಾರೇ ಆಗಿರಲಿ—
ಅವರು ಶಿಕ್ಷಕರಾಗಿರಲಿ, ಅಧಿಕಾರಿಗಳಾಗಿರಲಿ, ಮಧ್ಯವರ್ತಿಗಳಾಗಿರಲಿ—
ಒಬ್ಬ ಮಗುವಿನ ಭವಿಷ್ಯವನ್ನು ಮಾರಾಟ ಮಾಡಿದ ಅಪರಾಧಿಗಳಿಗೆ ಕ್ಷಮೆ ಇರಬಾರದು.
ಈ ಸೋರಿಕೆ ಹೇಗೆ ಆಯಿತು?
ಯಾರು ಮಾಡಿದರು?
ಎಷ್ಟು ಜನ ಈ ಕಲುಷಿತ ಜಾಲದಲ್ಲಿ ಸೇರಿದ್ದಾರೆ?
ಮಕ್ಕಳ ಕನಸುಗಳಿಗೆ ಎಷ್ಟು ಬೆಲೆ ಕಟ್ಟಲಾಗಿದೆ?
ಪ್ರತಿಯೊಂದು ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುವ ತನಕ ತನಿಖೆ ನಿಲ್ಲಬಾರದು.
ತಪ್ಪಿತಸ್ಥರನ್ನು ಬಂಧಿಸಿ, ಸಮಾಜದ ಮುಂದೆ ನಿಲ್ಲಿಸಿ ಶಿಕ್ಷಿಸಲೇಬೇಕು.ಇದು ಪ್ರಶ್ನೆ ಪತ್ರಿಕೆ ಸೋರಿಕೆಯ ಪ್ರಕರಣ ಮಾತ್ರವಲ್ಲ…ಇದು ಮಕ್ಕಳ ಮನಸ್ಸಿನ ಮೇಲೆ ನಡೆದ ಅತ್ಯಂತ ಕ್ರೂರ ದಾಳಿ.ಇದು ಅವರ ಆತ್ಮಸ್ಥೈರ್ಯವನ್ನು ಒಡೆಯುವ ಪ್ರಯತ್ನ.
ಶಿಕ್ಷಣ ಇಲಾಖೆಯ ಮೇಲಾಧಿಕಾರಿಗಳು ದಯವಿಟ್ಟು ಕಣ್ಣಮುಚ್ಚಿಕೊಂಡು ಕುಳಿತುಕೊಳ್ಳಬೇಡಿ.
ಇದು ನಾಳೆಯ ಕರ್ನಾಟಕದ ಪ್ರಶ್ನೆ!??
ಇದನ್ನು ಗಂಭೀರವಾಗಿ ಪರಿಗಣಿಸಿ, ಕಠಿಣ ಮತ್ತು ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು.
ಮಕ್ಕಳಿಗೆ ಹೇಳಬೇಕಾದದ್ದು ಒಂದೇ—
ನಿಮ್ಮ ಶ್ರಮ ವ್ಯರ್ಥವಾಗುವುದಿಲ್ಲ.
ಇನ್ನೂ ಸಮಯ ಇದೆ.
ಶಾಲೆಯಲ್ಲೂ, ಮನೆಯಲ್ಲಿ ಸಹ ಧೈರ್ಯದಿಂದ ರಿವಿಜನ್ ಮಾಡಿಕೊಳ್ಳಿ.
ಪಾಲಕರು, ಶಿಕ್ಷಕರು—ಈ ಹೊತ್ತಿನಲ್ಲಿ ಮಕ್ಕಳಿಗೆ ಬೇಕಾಗಿರುವುದು ಒತ್ತಡವಲ್ಲ,
ಅವರ ಬೆನ್ನಿಗೆ ನಿಲ್ಲುವ ಧೈರ್ಯ.
ಯಾವುದೇ ಕಾರಣಕ್ಕೂ ಮಕ್ಕಳನ್ನು ಕುಗ್ಗಿಸಬೇಡಿ,
ಅವರ ಮನಸ್ಸಿನಲ್ಲಿ ಭಯ ಬಿತ್ತಬೇಡಿ.
ಮಕ್ಕಳ ಕನಸುಗಳು ಪವಿತ್ರ.
ಅವುಗಳನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ.
ಶಿಕ್ಷಣಕ್ಕೆ ನ್ಯಾಯ ಸಿಗಲಿ.
ಮಕ್ಕಳ ಭವಿಷ್ಯಕ್ಕೆ ರಕ್ಷಣೆ ಸಿಗಲಿ.
— ಮೈನಾನಾಸೀರ್ ಕಾರ್ಗಲ್
ಸಾಹಿತಿ ಹಾಗೂ ಗುರುಕುಲ ಘಟಕದ ರಾಜ್ಯ ಮಹಿಳಾ ಪ್ರತಿನಿಧಿ













