POCSO CASE | 21 ವರ್ಷದ ಯುವಕನಿಗೆ 30 ವರ್ಷ ಕಠಿಣ ಜೈಲು ಶಿಕ್ಷೆ
ಶಿವಮೊಗ್ಗ : ಡಿಸೆಂಬರ್ 11: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಯುವಕನೋರ್ವನಿಗೆ, 30 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ, ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಎಫ್.ಟಿ.ಎಸ್.ಸಿ – 1 ನ್ಯಾಯಾಧೀಶರು ತೀರ್ಪು ನೀಡಿದ್ದಾರೆ.
ಭದ್ರಾವತಿಯ 21 ವರ್ಷದ ಯುವಕ ದೀರ್ಘಾವದಿಯ ಕಠಿಣ ಜೈಲು ಶಿಕ್ಷೆಗೆ ಗುರಿಯಾದವನು. ಜೈಲು ಶಿಕ್ಷೆಯ ಜೊತೆಗೆ 1.85 ಲಕ್ಷ ರೂ. ದಂಡ ಕೂಡ ನ್ಯಾಯಾಲಯ ವಿಧಿಸಿದೆ.
ನ್ಯಾಯಾಧೀಶ ನಿಂಗನಗೌಡ ಭ ಪಾಟೀಲ್ ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಶ್ರೀಧರ್ ಅವರು ವಾದ ಮಂಡಿಸಿದ್ದರು.
ಪ್ರಕರಣದ ಹಿನ್ನೆಲೆ :
2023 ನೇ ಸಾಲಿನಲ್ಲಿ ಪ್ರಕರಣ ವರದಿಯಾಗಿತ್ತು. 17 ವರ್ಷದ ಬಾಲಕಿಯ ಮೇಲೆ 21 ವರ್ಷದ ಯುವಕನು ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತಂತೆ ನೊಂದ ಬಾಲಕಿ ನೀಡಿದ ದೂರಿನ ಆಧಾರದ ಮೇರೆಗೆ, ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ರೀತ್ಯಾ ಪ್ರಕರಣ ದಾಖಲಾಗಿತ್ತು.
ಅಂದಿನ ಭದ್ರಾವತಿ ನಗರ ವೃತ್ತದ ಸರ್ಕಲ್ ಇನ್ಸ್’ಪೆಕ್ಟರ್ ಆಗಿದ್ದ ಶ್ರೀಶೈಲ ಕುಮಾರ ಜೆ ಅವರು ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ದಾಖಲಿಸಿದ್ದರು.