Headlines

ಹೊಸವರ್ಷ ಸಂಭ್ರಮಾಚರಣೆ – ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ | ಎಸ್ ಪಿ ಮಿಥುನ್ ಕುಮಾರ್ ಖಡಕ್ ಎಚ್ಚರಿಕೆ

New Year Celebrations – Strict Guidelines from Police Department | SP Mithun Kumar

ಹೊಸವರ್ಷ ಸಂಭ್ರಮಾಚರಣೆ: ಸಾರ್ವಜನಿಕ ಸುರಕ್ಷತೆಗೆ ಶಿವಮೊಗ್ಗ ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ

ಹೊಸ ವರ್ಷದ ಸಂಭ್ರಮಾಚರಣೆಗೆ ಸಿದ್ಧತೆಗಳು ಜೋರಾಗಿರುವ ನಡುವೆ, ಸಾರ್ವಜನಿಕರ ಸುರಕ್ಷತೆ ಹಾಗೂ ಶಾಂತಿ ಕಾಪಾಡುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆ ಹೊಸವರ್ಷದ ಆಚರಣೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಕಾನೂನು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಜಿ.ಕೆ. ಅವರ ನೇತೃತ್ವದಲ್ಲಿ ಜಿಲ್ಲೆಯ ಹೋಟೆಲ್‌ಗಳು, ರೆಸಾರ್ಟ್‌ಗಳು, ಹೋಂಸ್ಟೇಗಳು ಹಾಗೂ ವಿವಿಧ ಕಾರ್ಯಕ್ರಮಗಳ ಆಯೋಜಕರೊಂದಿಗೆ ಸಭೆ ನಡೆಸಲಾಗಿದ್ದು, ಈ ವೇಳೆ ಹಲವು ಪ್ರಮುಖ ಸೂಚನೆಗಳನ್ನು ಜಾರಿಗೆ ತರಲಾಗಿದೆ. ಹೊಸವರ್ಷದ ಕಾರ್ಯಕ್ರಮಗಳಿಗೆ ಆಗಮಿಸುವ ಅತಿಥಿಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು ಎಂದು ಎಸ್‌ಪಿ ಸೂಚಿಸಿದ್ದು, ಕುಟುಂಬಸ್ಥರು, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಆಯೋಜಕರ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದ್ದಾರೆ.

ಕಾರ್ಯಕ್ರಮಗಳಿಗೆ ಹಾಜರಾಗುವ ಪ್ರತಿಯೊಬ್ಬ ಅತಿಥಿಯ ಗುರುತಿನ ಚೀಟಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಭದ್ರತೆಯ ದೃಷ್ಟಿಯಿಂದ ಸಿಸಿ ಕ್ಯಾಮೆರಾಗಳ ಅಳವಡಿಕೆ ಕಡ್ಡಾಯವಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಪೂರ್ವ ಮಾಹಿತಿ ನೀಡಬೇಕಾಗಿದೆ.
ಮಾದಕ ವಸ್ತುಗಳ ಬಳಕೆ ಹಾಗೂ ಮಾರಾಟದ ಕುರಿತು ಪೊಲೀಸ್ ಇಲಾಖೆ ತೀವ್ರ ಎಚ್ಚರಿಕೆ ನೀಡಿದ್ದು, ಡ್ರಗ್ಸ್ ಪತ್ತೆಯಾದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ಸಂಪೂರ್ಣವಾಗಿ ತಡೆಗಟ್ಟಬೇಕು ಹಾಗೂ ಅಗತ್ಯ ಸಂದರ್ಭದಲ್ಲಿ 112 ತುರ್ತು ಸಹಾಯವಾಣಿಗೆ ಸಂಪರ್ಕಿಸಬೇಕು ಎಂದು ಸೂಚಿಸಲಾಗಿದೆ.

ಪೊಲೀಸ್ ಇಲಾಖೆಯ ಎಂಟು ಪ್ರಮುಖ ಸೂಚನೆಗಳು:

ಹೊಸವರ್ಷದ ಸಂಭ್ರಮಾಚರಣೆಗೆ ಸಂಬಂಧಿಸಿದ Do’s ಮತ್ತು Don’ts ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕುಟುಂಬಸ್ಥರು, ಮಕ್ಕಳು ಹಾಗೂ ಹಿರಿಯರಿಗೆ ಯಾವುದೇ ತೊಂದರೆಯಾಗದಂತೆ ಸುರಕ್ಷಿತ ವಾತಾವರಣ ಒದಗಿಸಬೇಕು.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದನ್ನು ಸಂಪೂರ್ಣ ನಿಷೇಧಿಸಬೇಕು. ಅಪಘಾತಗಳ ತಡೆಗೆ ಅಗತ್ಯ ಕ್ರಮ ವಹಿಸಬೇಕು.

ಕಾರ್ಯಕ್ರಮಕ್ಕೆ ಬರುವ ಅತಿಥಿಗಳ ಪೂರ್ವ ಮಾಹಿತಿ ಸಂಗ್ರಹಿಸಿ, ನಿಗದಿತ ಹಾಗೂ ಸುರಕ್ಷಿತ ಸಂಖ್ಯೆಗೆ ಮಾತ್ರ ಅನುಮತಿ ನೀಡಬೇಕು.

ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ, ಎಲ್ಲ ಅತಿಥಿಗಳ ಐಡಿ ಪ್ರೂಫ್ ಪಡೆದು ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು.

ಯಾವುದೇ ಕಾರಣಕ್ಕೂ ಮಾದಕ ವಸ್ತುಗಳ ಬಳಕೆ ಅನುಮತಿಯಿಲ್ಲ. ಪತ್ತೆಯಾದಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಲಾಗುವುದು.

ಪಟಾಕಿ ಬಳಕೆಯಲ್ಲಿ ಸುರಕ್ಷತಾ ಕ್ರಮಗಳನ್ನು ಪಾಲಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಸಮರ್ಪಕ ಬೆಳಕಿನ ವ್ಯವಸ್ಥೆ ಮಾಡಬೇಕು.

ಸಂಚಾರಕ್ಕೆ ಅಡಚಣೆ ಆಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಡಿಸೆಂಬರ್ 31ರಂದು ರಾತ್ರಿ 12ರಿಂದ ಆರಂಭವಾಗುವ ಸಂಭ್ರಮಾಚರಣೆಯನ್ನು ರಾತ್ರಿ 1 ಗಂಟೆಗೆ ಮುಕ್ತಾಯಗೊಳಿಸಬೇಕು.

ಈಜುಕೊಳಗಳು ಇದ್ದಲ್ಲಿ ಹೆಚ್ಚುವರಿ ಸುರಕ್ಷತೆ ಒದಗಿಸಬೇಕು. ಧ್ವನಿವರ್ಧಕ ಬಳಕೆಯಲ್ಲಿ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲಿಸಬೇಕು ಹಾಗೂ ಅಗ್ನಿ ಅವಘಡ ತಪ್ಪಿಸಲು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು.

ಈ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಹೊಸವರ್ಷವನ್ನು ಶಾಂತಿಯುತ ಹಾಗೂ ಸುರಕ್ಷಿತವಾಗಿ ಆಚರಿಸಲು ಪೊಲೀಸ್ ಇಲಾಖೆ ಸಾರ್ವಜನಿಕರು ಹಾಗೂ ಆಯೋಜಕರಿಗೆ ಮನವಿ ಮಾಡಿದೆ.