ಇನ್‌ಸ್ಟಾಗ್ರಾಂ ‘ರೀಲ್ಸ್’ ಅಭಿಮಾನಿ ಸೋಗಿನಲ್ಲಿ ಶಿಕ್ಷಕನ ದರೋಡೆ – ಶಿವಮೊಗ್ಗದಲ್ಲಿ ಆಘಾತಕಾರಿ ಘಟನೆ
ಶಿವಮೊಗ್ಗ: ತಮ್ಮ ಇನ್‌ಸ್ಟಾಗ್ರಾಂ ರೀಲ್ಸ್‌ಗೆ ಅಭಿಮಾನಿ ಎಂದು ನಂಬಿಸಿ, ಶಿಕ್ಷಕರೊಬ್ಬರನ್ನು ದರೋಡೆ ಮಾಡಿರುವ ಅಚ್ಚರಿಯ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ಈ ಕೃತ್ಯ ನಡೆದಿದೆ.
ಖಾಸಗಿ ಶಾಲೆಯ ಶಿಕ್ಷಕರೊಬ್ಬರು ಇನ್‌ಸ್ಟಾಗ್ರಾಂನಲ್ಲಿ ನಿಯಮಿತವಾಗಿ ರೀಲ್ಸ್ ಅಪ್‌ಲೋಡ್ ಮಾಡುತ್ತಿದ್ದರು. ಅವರ ರೀಲ್ಸ್‌ಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ವ್ಯಕ್ತಿಯೊಬ್ಬ, ಮೆಸೇಜ್ ಮೂಲಕ ಶಿಕ್ಷಕರನ್ನು ಸಂಪರ್ಕಿಸಿದ್ದ. ಬಳಿಕ ಅವರನ್ನು ಭೇಟಿಯಾಗಬೇಕೆಂದು ಕೋರಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ರೀಲ್ಸ್ಗೆ ಲೈಕ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದವನೇ, ಕೊನೆಗೆ ದರೋಡೆಗೆ ಸಂಚು ರೂಪಿಸಿರುವುದು ಈ ಪ್ರಕರಣದ ಅತ್ಯಂತ ಆಘಾತಕಾರಿ ಅಂಶವಾಗಿದೆ.
ನವೆಂಬರ್ 7ರ ರಾತ್ರಿ 9:30ರ ಸುಮಾರಿಗೆ ಶಿಕ್ಷಕರು ತಮ್ಮ ಬೈಕಿನಲ್ಲಿ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ತೆರಳಿದ್ದರು. ಅಲ್ಲಿ ಓಮ್ಮಿ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ, ‘ನಾನೇ ನಿಮಗೆ ಮೆಸೇಜ್ ಮಾಡಿದ್ದು’ ಎಂದು ಪರಿಚಯಿಸಿಕೊಂಡಿದ್ದಾನೆ. ಕಾರಿನಿಂದ ಇಳಿದ ಮೂವರು ವ್ಯಕ್ತಿಗಳು ತಕ್ಷಣ ಶಿಕ್ಷಕರನ್ನು ಸುತ್ತುವರಿದು, ಚಾಕು ತೋರಿಸಿ ಬೆದರಿಸಿದ್ದಾರೆ.
ದರೋಡೆಕೋರರು ಶಿಕ್ಷಕರ ಕೈಯಲ್ಲಿದ್ದ ಉಂಗುರಗಳು, ಕೊರಳಲ್ಲಿದ್ದ ಚಿನ್ನದ ಸರ, ಕಿವಿಯೋಲೆ ಹಾಗೂ ಮೊಬೈಲ್ ಫೋನ್ ಅನ್ನು ಬಲವಂತವಾಗಿ ಕಸಿದುಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಶಿಕ್ಷಕರ ಮೊಬೈಲ್ ಫೋನ್ ಪೇ ಅಪ್ಲಿಕೇಶನ್ ಮೂಲಕ 3,500 ರೂಪಾಯಿ ನಗದನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗಾಗಿ ತೀವ್ರ ತನಿಖೆ ನಡೆಸುತ್ತಿದ್ದಾರೆ.




