Headlines

RIPPONPETE | ಆನೆ ಹಾವಳಿಗೆ ತತ್ತರಿಸಿದ ರೈತ ; ತತ್ತಕ್ಷಣ ಆನೆ ಸ್ಥಳಾಂತರ – ಪರಿಹಾರಕ್ಕೆ ಒತ್ತಾಯಿಸಿ ಅರಣ್ಯ ಕಛೇರಿ‌ ಮುಂಭಾಗ ನ.27ಕ್ಕೆ ಪ್ರತಿಭಟನೆ

RIPPONPETE | ಆನೆ ಹಾವಳಿಗೆ ತತ್ತರಿಸಿದ ರೈತ – ತತ್ತಕ್ಷಣ ಆನೆ ಸ್ಥಳಾಂತರ – ಪರಿಹಾರಕ್ಕೆ ಒತ್ತಾಯಿಸಿ ಅರಣ್ಯ ಕಛೇರಿ‌ ಮುಂಭಾಗ ನ.27ಕ್ಕೆ ಪ್ರತಿಭಟನೆ

ರಿಪ್ಪನ್ ಪೇಟೆ : ಪಟ್ಟಣದ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ಆನೆ ಹಾವಳಿ ತೀವ್ರಗೊಂಡಿದ್ದು, ರೈತರ ಬೆಳೆಗಳಿಗೆ ಅಪಾರ ನಷ್ಟ ಉಂಟಾಗಿರುವುದಲ್ಲದೆ, ಮಾನವ ಜೀವಕ್ಕೂ ಅಪಾಯ ಎದುರಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಆನೆಗಳ ದಾಳಿಯಿಂದ ರೈತರ ಪ್ರಾಣ ಬಲಿಯಾದ ಘಟನೆಗಳು ಸಂಭವಿಸಿದ್ದು, ಜನರು ಜೀವಭಯದಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಆನೆಗಳನ್ನು ತಕ್ಷಣ ಸ್ಥಳಾಂತರಿಸಬೇಕು, ಬೆಳೆ ನಷ್ಟಕ್ಕೆ ಪರಿಹಾರ ನೀಡಬೇಕು, ಹಾಗೂ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಾರಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾಪಂ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಹೇಳಿದರು.

ರಿಪ್ಪನ್ ಪೇಟೆ ಪಟ್ಟಣದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ನವೆಂಬರ್ 27 ರ ಗುರುವಾರ ಬೆಳಗ್ಗೆ 10 ಗಂಟೆಗೆ, ಅರಸಾಳು ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ರೈತರ ಭಾರಿ ಪ್ರತಿಭಟನೆ ಜರುಗಲಿದೆ.ಈ ಪ್ರತಿಭಟನೆಯಲ್ಲಿ ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ. ಧನಂಜಯ್ ಸರ್ಜಿ, ಮಾಜಿ ಶಾಸಕರಾದ ಬಿ. ಸ್ವಾಮಿರಾವ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ. ಜಗದೀಶ್, ಟಿ.ಡಿ. ಮೇಘರಾಜ್, ಹೊನಗೋಡು ರತ್ನಾಕರ್, ತಾ.ಪಂ. ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಜಿ.ಪಂ. ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎನ್. ವರ್ತೇಶ್, ಹಾಗೂ ಕೆರೆಹಳ್ಳಿ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಎನ್. ಸತೀಶ್ ನೇತೃತ್ವ ವಹಿಸಲಿದ್ದಾರೆ ಎಂದರು.

ಕಳೆದ ಐದಾರು ದಿನಗಳಿಂದ ಬೆಳ್ಳೂರು, ಅರಸಾಳು, ಹೆದ್ದಾರಿಪುರ ಗ್ರಾಮ ಪಂಚಾಯಿತ್ ವ್ಯಾಪ್ತಿಯಲ್ಲಿ ಬೀಡು ಬಿಟ್ಟಿರುವ ಆನೆಗಳನ್ನು ಅರಣ್ಯ ಇಲಾಖೆಯವರು ಸ್ಥಳಾಂತರ ಮಾಡುವುದು ಇಲ್ಲವೇ ಓಡಿಸುವ ಕೆಲಸವನ್ನು ಮಾಡುವಂತೆ ಹೇಳಿ ಕಳೆದ ವರ್ಷ ಸಹ ಇದೇ ರೀತಿ ಆನೆ ದಾಳಿ ನಡೆದಿದ್ದು ಆಗ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗಿತ್ತು. ಅಧಿಕಾರಿಗಳ ಭರವಸೆಯಿಂದಾಗಿ ನಮ್ಮ ರೈತರು ಶಾಶ್ವತ ಪರಿಹಾರ ದೊರಕಿತು ಎಂದು ನಿಟ್ಟುಸಿರು ಬಿಡುವ ಮುನ್ನವೇ ಪುನಃ ಆನೆಗಳು ಒಕ್ಕರಿಸಿಕೊಂಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಜೆಪಿ–ಜೆಡಿಎಸ್ ಕಾರ್ಯಕರ್ತರು, ರೈತಪರ ಸಂಘಟನೆಗಳು, ಆನೆ ದಾಳಿಗೆ ಒಳಗಾದ ಗ್ರಾಮಗಳ ರೈತರು ಮತ್ತು ಸಾರ್ವಜನಿಕರು ಹಾಗೂ ವಿಶೇಷವಾಗಿ ಕಟ್ಟಡ ಕಾರ್ಮಿಕರ ಸಂಘದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.“ರೈತರ ಜೀವ–ಸಂಪತ್ತನ್ನು ರಕ್ಷಿಸುವುದು ಸರ್ಕಾರದ ಜವಾಬ್ದಾರಿ. ಶಾಶ್ವತ ಪರಿಹಾರದ ಬೇಡಿಕೆ ಯಶಸ್ವಿಯಾಗುವವರೆಗೆ ಹೋರಾಟ ಮುಂದುವರಿಯುತ್ತದೆ,” ಎಂದು ಹೇಳಿದರು.

ಈ ಸಂಧರ್ಭದಲ್ಲಿ ರಿಪ್ಪನ್ ಪೇಟೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಎನ್ ಸತೀಶ್ , ಪ್ರಮುಖರಾದ ಆನಂದ್ ಮೆಣಸೆ ,ಸುಂದರೇಶ್ ಜೆಡಿಎಸ್ ತಾಲ್ಲುಕ್ ಅಧ್ಯಕ್ಷ ಎನ್ ವರ್ತೇಶ್ ,ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ಸದಸ್ಯ ಜಿ.ಡಿ.ಮಲ್ಲಿಕಾರ್ಜುನ,ಬೆಳ್ಳೂರು ಗ್ರಾಪಂ ಸದಸ್ಯ ರಾಜೇಶ್ ಬುಕ್ಕಿವರೆ,ಕಟ್ಟಡ ಕಾರ್ಮಿಕರ ಸಂಘದ ಮಹ್ಮದ್ ಹುಸೇನ್, ಸುಧೀರ್ ಕೋಟೆತಾರಿಗ ಹಾಗೂ ಇನ್ನಿತರರು ಇದ್ದರು‌.