Headlines

ಮೂರು ತಿಂಗಳ ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಹಾಕಿದ ಪತಿಗೆ ಒಂದು ವರ್ಷ ಜೈಲು ಶಿಕ್ಷೆ

ಮೂರು ತಿಂಗಳ ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಹಾಕಿದ ಪತಿಗೆ ಒಂದು ವರ್ಷ ಜೈಲು ಶಿಕ್ಷೆ

ಶಿವಮೊಗ್ಗ: ಅಕ್ರಮ ಸಂಬಂಧ ಹೊಂದಿದ್ದಲ್ಲದೆ, ಗರ್ಭಿಣಿಯಾಗಿದ್ದ ತನ್ನ ಪತ್ನಿಯನ್ನು ಮನೆಯಿಂದ ಹೊರಹಾಕಿದ ಪತಿಗೆ ಶಿವಮೊಗ್ಗದ ನ್ಯಾಯಾಲಯವು ಒಂದು ವರ್ಷದ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿದೆ.

ಹರೀಶ್ ಎಂಬುವವರ ವಿರುದ್ಧ ಆತನ ಪತ್ನಿ ನೀಡಿದ ದೂರಿನ ವಿಚಾರಣೆ ಪೂರ್ಣಗೊಂಡ ಬಳಿಕ, 2ನೇ ಜೆ.ಎಂ.ಎಫ್.ಸಿ ನ್ಯಾಯಾಲಯವು ಅಕ್ಟೋಬರ್ 29, 2025ರಂದು ತೀರ್ಪು ನೀಡಿದೆ.

ವಿವಾಹದ ಬಳಿಕ ಹರೀಶ್ ಮತ್ತೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ. ಈ ಕಾರಣಕ್ಕೆ ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದನು. ಇನ್ನೂ ಮೂರು ತಿಂಗಳ ಗರ್ಭಿಣಿಯಾಗಿದ್ದ ಪತ್ನಿಯನ್ನು ಮನೆಬಿಟ್ಟು ಹೊರಹಾಕಿದ್ದಾನೆ. ನಂತರ ಪ್ರಸವವಾದ ಬಳಿಕವೂ ಪತ್ನಿಯನ್ನು ಮನೆಗೆ ಸೇರಿಸದೇ, ಹರೀಶ್, ಅವನ ತಾಯಿ, ತಂದೆ ಹಾಗೂ ಮೈದುನ ಗಲಾಟೆ ಮಾಡಿ ಜೀವ ಬೆದರಿಕೆ ಹಾಕಿದರೆಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2018ರಲ್ಲಿ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಐಪಿಸಿ ಸೆಕ್ಷನ್‌ 498(ಎ), 506 ಮತ್ತು 504ರಡಿ ಪ್ರಕರಣ ದಾಖಲಿಸಲ್ಪಟ್ಟಿತ್ತು. ವಿಚಾರಣೆಯ ನಂತರ, ತನಿಖಾಧಿಕಾರಿಯಾಗಿದ್ದ ಪಿಎಸ್‌ಐ ಶರಾವತಿ ಎಂ. ಚಾರ್ಜ್‌ ಶೀಟ್‌ ಸಲ್ಲಿಸಿದ್ದರು.

ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಕಿರಣ್ ಕುಮಾರ್ ವಾದ ಮಂಡಿಸಿದ್ದು, ನ್ಯಾಯಾಲಯವು ಆರೋಪಿಗೆ ಒಂದು ವರ್ಷದ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.