ಟೋಲ್‌ಗೇಟ್ ವಿವಾದ : ಅ.9 ರಂದು ರಂದು ಶಿಕಾರಿಪುರ ಬಂದ್ ಗೆ ಕರೆ
ಶಿಕಾರಿಪುರ, ಸೆಪ್ಟೆಂಬರ್ ೨೮ : ಕುಟ್ರಳ್ಳಿ ಟೋಲ್‌ಗೇಟ್ ತೆರವುಗೊಳಿಸುವಂತೆ ಆಗ್ರಹಿಸಿ ಅಕ್ಟೋಬರ್ ೯ರಂದು ಶಿಕಾರಿಪುರ ಪಟ್ಟಣ ಬಂದ್ ನಡೆಸಲು ಟೋಲ್‌ಗೇಟ್ ಹೋರಾಟ ಸಮಿತಿ ಕರೆ ನೀಡಿದೆ ಎಂದು ಸಮಿತಿ ಮುಖಂಡ, ನ್ಯಾಯವಾದಿ ಶಿವರಾಜ್ ತಿಳಿಸಿದ್ದಾರೆ.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಒಂದು ವರ್ಷದಿಂದ ಟೋಲ್‌ಗೇಟ್ ತೆರವಿಗೆ ಹೋರಾಟ ನಡೆಸುತ್ತಿದ್ದೇವೆ. ಸಚಿವರು, ಸಂಸದರು, ಶಾಸಕರು ಎಲ್ಲರೂ ಬೆಂಬಲ ವ್ಯಕ್ತಪಡಿಸಿದರೂ, ಕಾಣದ ಶಕ್ತಿಯ ಕಾರಣದಿಂದ ಟೋಲ್‌ಗೇಟ್ ಇನ್ನೂ ತೆರವುಗೊಂಡಿಲ್ಲ. ಆದ್ದರಿಂದ ಪಟ್ಟಣ ಬಂದ್‌ಗೆ ತೀರ್ಮಾನಿಸಿದ್ದೇವೆ” ಎಂದು ಹೇಳಿದರು.
ಬಸ್ ಮಾಲೀಕರು, ರೈತ ಸಂಘಟನೆಗಳು, ಲಗೇಜ್ ವಾಹನ ಮಾಲೀಕರು ಹೋರಾಟಕ್ಕೆ ಬೆಂಬಲ ಘೋಷಿಸಿರುವುದಾಗಿ ಅವರು ತಿಳಿಸಿದರು. ಜೊತೆಗೆ ಪಟ್ಟಣದ ಎಲ್ಲಾ ವ್ಯಾಪಾರಿಗಳು ಬಂದ್‌ಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ಶಿವರಾಜ್ ಆರೋಪಿಸಿ, “ಅಕ್ರಮ ಟೋಲ್‌ಗೆ ಜಿಲ್ಲಾಧಿಕಾರಿಯೇ ಬೆಂಬಲವಾಗಿ ನಿಂತಿದ್ದಾರೆ. ೪೦೦ಕ್ಕೂ ಹೆಚ್ಚು ಜನ ಮನವಿ ಸಲ್ಲಿಸಲು ತೆರಳಿದಾಗ, ಸ್ವೀಕರಿಸುವ ಸೌಜನ್ಯ ಕೂಡ ತೋರಿಸಲಿಲ್ಲ. ಪ್ರತಿಭಟನೆಯಲ್ಲಿ ಪಾಲ್ಗೊಂಡ ಜನರಿಗಿಂತ ಹೆಚ್ಚು ಪೊಲೀಸರನ್ನು ನಿಯೋಜಿಸಲಾಯಿತು. ನಾವು ಸಲ್ಲಿಸಿದ ಮನವಿಗಳಿಗೆ ಲಿಖಿತ ಭರವಸೆ ಸಿಕ್ಕಿಲ್ಲ” ಎಂದರು.
ರೈತ ಮುಖಂಡ ರಾಜಣ್ಣ ಮಾತನಾಡಿ, “ರಾಜ್ಯ ಹೆದ್ದಾರಿ ಕಾಯ್ದೆಗೆ ವಿರುದ್ಧವಾಗಿ ಟೋಲ್‌ಗೇಟ್ ನಿರ್ಮಾಣವಾಗಿದೆ. ಇದರಿಂದ ಗ್ರಾಮೀಣ ಜನ, ರೈತರ ಶೋಷಣೆಯಾಗುತ್ತಿದೆ. ಆಡಳಿತವಾಗಲಿ, ವಿರೋಧ ಪಕ್ಷವಾಗಲಿ — ಯಾರೂ ಟೋಲ್ ತೆರವಿನಲ್ಲಿ ಯಶಸ್ವಿಯಾಗಿಲ್ಲ. ಆದ್ದರಿಂದ ಜನರೇ ಬೀದಿಗಿಳಿಯಬೇಕಾಗಿದೆ” ಎಂದು ತಿಳಿಸಿದರು.
ಸಮಿತಿಯ ಸಭೆಯಲ್ಲಿ ಸಂಚಾಲಕ ವಿನಯ್ ಪಾಟೀಲ್, ರೈತ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಹಾಲೇಶಪ್ಪಗೌಡ್ರು, ಮುಖಂಡರಾದ ಪರಮೇಶ್ವರಪ್ಪ, ಮಂಜಪ್ಪ, ಪುಟ್ಟನಗೌಡ್ರು, ಈರಪ್ಪ ಪ್ಯಾಟಿ, ಶಬ್ಬೀರ್, ಪ್ರಶಾಂತ್ ಪೂಜಾರ್ ಮೊದಲಾದವರು ಉಪಸ್ಥಿತರಿದ್ದರು.

