Headlines

ರಿಪ್ಪನ್ ಪೇಟೆ ಬಾಲಕರ ವಸತಿ ನಿಲಯಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ , ಪರಿಶೀಲನೆ

ರಿಪ್ಪನ್ ಪೇಟೆ ಬಾಲಕರ ವಸತಿ ನಿಲಯಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ದಿಡೀರ್ ಭೇಟಿ , ಪರಿಶೀಲನೆ

ರಿಪ್ಪನ್ ಪೇಟೆ : ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ರಿಪ್ಪನ್‌ಪೇಟೆಯ ಹಳೆಯ ಸಂತೇಮಾರ್ಕೆಟ್ ರಸ್ತೆಯಲ್ಲಿರುವ ಬಾಲಕರ ವಸತಿ ನಿಲಯಕ್ಕೆ ದಿಡೀರ್ ಭೇಟಿ ನೀಡಿದರು. ಯಾವುದೇ ಪೂರ್ವ ಸೂಚನೆ ಇಲ್ಲದೆ ದಿಡೀರ್ ಆಗಮಿಸಿ ಮಕ್ಕಳೊಂದಿಗೆ ಕಾಲ ಕಳೆದರು. ಸಾಮಾನ್ಯವಾಗಿ ಸಭಾಂಗಣಗಳಲ್ಲಿ, ವೇದಿಕೆಗಳ ಮೇಲೆ ಮಾತ್ರ ಕಾಣುವ ನಾಯಕರು ಈ ಬಾರಿ ಮಕ್ಕಳ ನಡುವೆ ನಿಂತು ಅವರ ಮಾತುಗಳನ್ನು ಗಮನದಿಂದ ಆಲಿಸಿದರು. ನಿಲಯದ ಸೌಕರ್ಯಗಳು, ಪರಿಸರ ಮತ್ತು ನಿರ್ವಹಣೆಯ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದರು.

ವಸತಿ ನಿಲಯದಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು, ಅವರ ದಿನನಿತ್ಯದ ಬದುಕು, ಆಹಾರ ವ್ಯವಸ್ಥೆ, ಶಿಕ್ಷಣದ ಅವಕಾಶಗಳು ಮತ್ತು ಮೂಲಭೂತ ಸೌಲಭ್ಯಗಳ ಕುರಿತು ನೇರವಾಗಿ ವಿಚಾರಿಸಿದರು.ಮಕ್ಕಳು ತಮ್ಮ ಶಾಲೆಯ ಅನುಭವ, ಹಾಸ್ಟೆಲ್ ಜೀವನ ಹಾಗೂ ದಿನನಿತ್ಯ ಎದುರಿಸುವ ಸವಾಲುಗಳನ್ನು ನಿರಾಳವಾಗಿ ಹಂಚಿಕೊಂಡರು. ಶಾಸಕರು ಮಕ್ಕಳೊಂದಿಗೆ ಹಾಸ್ಯವಾಡಿ,“ನಿಮ್ಮ ಕನಸುಗಳನ್ನು ನನಸು ಮಾಡಲು ಸರ್ಕಾರದ ಎಲ್ಲ ಸೌಲಭ್ಯಗಳನ್ನು ನಿಮ್ಮತ್ತ ತಂದುಕೊಡುವುದು ನಮ್ಮ ಕರ್ತವ್ಯ” ಎಂದು ಮಕ್ಕಳಿಗೆ ಧೈರ್ಯ ತುಂಬಿದ ಶಾಸಕರ ಮಾತು ಮಕ್ಕಳ ಮುಖದಲ್ಲಿ ಉತ್ಸಾಹವನ್ನು ಮೂಡಿಸಿತು ಇದೇ ಸಂದರ್ಭದಲ್ಲಿ ಉತ್ತಮವಾಗಿ ಓದುವ ಉತ್ತಮ ಅಂಕ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಈ ಕುರಿತು ಶಾಸಕ ಗೋಪಾಲಕೃಷ್ಣ ಪ್ರತಿಕ್ರಿಯೆ ನೀಡುತ್ತಾ, “ಮಕ್ಕಳ ಭವಿಷ್ಯವೇ ನಮ್ಮ ದೇಶದ ಭವಿಷ್ಯ. ಅವರ ಶಿಕ್ಷಣ, ಆರೋಗ್ಯ ಮತ್ತು ಸೌಲಭ್ಯಗಳನ್ನು ಸುಧಾರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಶಾಸಕರ ಈ ಆಕಸ್ಮಿಕ ಭೇಟಿ ಮಕ್ಕಳಲ್ಲಿ ಸಂತೋಷದ ಅಲೆ ಹರಡಿತು. ಮಕ್ಕಳು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಲು ಅವಕಾಶ ಸಿಕ್ಕ ಕಾರಣ ಹರ್ಷ ವ್ಯಕ್ತಪಡಿಸಿದರು. ಪೋಷಕರು ಹಾಗೂ ಸ್ಥಳೀಯರು ಶಾಸಕರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿ, “ಈ ರೀತಿಯ ತಕ್ಷಣದ ಭೇಟಿಗಳು ಜನರ ಸಮಸ್ಯೆಗಳನ್ನು ನೇರವಾಗಿ ತಿಳಿಯಲು ಸಹಾಯಕವಾಗುತ್ತವೆ” ಎಂದು ಅಭಿಪ್ರಾಯಪಟ್ಟರು.

ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ , ಮುಖಂಡರಾದ ಮಧುಸೂಧನ್ , ಉಮಾಕರ್ ಕಾನುಗೋಡು , ಪ್ರವೀಣ್ ಸುಳುಗೋಡು , ಪ್ರಕಾಶ್ ಪಾಲೇಕರ್ , ಅಬ್ದುಲ್ ರವೂಫ಼್ ಹಾಗು ಇನ್ನಿತರರು ಇದ್ದರು.