ಜಾತಿ ಗಣತಿ ಸಮೀಕ್ಷೆ ಕರ್ತವ್ಯಕ್ಕೆ ಗೈರು – ಹೊಸನಗರ ಶಿಕ್ಷಣ ಇಲಾಖೆಯ ಅಧಿಕಾರಿ ಅಮಾನತು
ರಾಜ್ಯದಲ್ಲಿ ಸೆಪ್ಟೆಂಬರ್ 22ರಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಆರಂಭವಾಗಿದೆ. ಈ ಸಮೀಕ್ಷೆಯನ್ನು ಯಶಸ್ವಿಯಾಗಿ ಮುನ್ನಡೆಸಲು ರಾಜ್ಯದ ಸರ್ಕಾರಿ ಶಿಕ್ಷಕರನ್ನು ನೇಮಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಶಿಕ್ಷಣ ಇಲಾಖೆ ಅಧಿಕಾರಿಯಾದ ಎಂ. ರಂಗನಾಥ್ ಅವರು ಕರ್ತವ್ಯಕ್ಕೆ ಗೈರುರಾಗಿದ್ದ ಕಾರಣದಿಂದ ಅಮಾನತುಗೊಳಿಸಲಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ.
ಎಂ. ರಂಗನಾಥ್ ಅವರು BRC (ಬ್ಲಾಕ್ ಸಂಪನ್ಮೂಲ ಕೇಂದ್ರ) ಸಮನ್ವಯಾಧಿಕಾರಿಗಳಾಗಿ ಸೇವೆ ನೀಡುತ್ತಿದ್ದು, ಸಮೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲೇ ರಜೆ ಹಾಕಿ, ಹಿರಿಯ ಅಧಿಕಾರಿಗಳ ದೂರವಾಣಿ ಕರೆಗಳಿಗೆ ಸ್ಪಂದನೆ ನೀಡದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
ಇನ್ನೂ ಸಮೀಕ್ಷೆ ಪ್ರಗತಿಯಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದು, ಸರ್ವರ್ ಸಮಸ್ಯೆ, ಮೊಬೈಲ್ ಆಪ್ ದೋಷಗಳು ಮುಂತಾದವುಗಳು ಶಿಕ್ಷಕರನ್ನು ಸಂಕಷ್ಟಕ್ಕೆ ದೂಡಿವೆ. ಈ ಹಿನ್ನೆಲೆಯಲ್ಲಿ, ಜಾತಿಗಣತಿ ಕಾರ್ಯವನ್ನು ತಕ್ಷಣವೇ ಸುಗಮಗೊಳಿಸುವಂತೆ ರಾಜ್ಯದ ಶಿಕ್ಷಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
