ಅಮ್ಮನಘಟ್ಟ ಜೇನುಕಲ್ಲಮ್ಮ ಜಾತ್ರಾ ಮಹೋತ್ಸವ – ಶಾಸಕ ಬೇಳೂರು ಗೋಪಾಲಕೃಷ್ಣ ಭಾಗಿ
ರಿಪ್ಪನ್ ಪೇಟೆ : ಮಲೆನಾಡಿನ ಆರಾಧ್ಯದೈವ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ ಮೂರನೇ ಜಾತ್ರಾ ಮಹೋತ್ಸವದಲ್ಲಿ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಮಂಗಳವಾರ ನೂರಾರು ಭಕ್ತರೊಂದಿಗೆ ಪಾಲ್ಗೊಂಡು ದೇವಿಯ ದರ್ಶನ ಪಡೆದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮ್ಮನಘಟ್ಟ ಕ್ಷೇತ್ರವು ಮುಂದಿನ ದಿನಗಳಲ್ಲಿ ಸಿಗಂದೂರು ಶ್ರೀ ಕ್ಷೇತ್ರದಂತೆಯೇ ಪ್ರಸಿದ್ಧ ಪ್ರವಾಸಿ ತಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳ ಕೊರತೆ ನಿವಾರಣೆಯಾಗುವುದರೊಂದಿಗೆ ಕ್ಷೇತ್ರವು ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದಲೇ ಪ್ರವಾಸಿತಾಣವಾಗಿ ಗುರುತಿಸಲ್ಪಟ್ಟಿರುವುದನ್ನು ಅವರು ನೆನಪಿಸಿದರು.
ಹಿಂದಿನ ಅವಧಿಯಲ್ಲಿ ಕ್ಷೇತ್ರಕ್ಕೆ ನೀಡಿದ ₹10 ಲಕ್ಷ ಅನುದಾನ ಬಳಕೆಯಾಗದೇ ಹಿಂತೆಗೆದುಕೊಳ್ಳಲಾಯಿತಾದರೂ, ಈಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶಿಫಾರಸ್ಸಿನ ಮೇರೆಗೆ ₹1 ಕೋಟಿ ಅನುದಾನ ಬಿಡುಗಡೆಯಾಗಿರುವುದಾಗಿ ಅವರು ತಿಳಿಸಿದರು. ಅಗತ್ಯ ಬಿದ್ದರೆ ಹೆಚ್ಚಿನ ನೆರವು ಒದಗಿಸಲು ಸಿದ್ದವಿರುವುದನ್ನೂ ಭರವಸೆ ನೀಡಿದರು.
ಸುಮಾರು 25 ಎಕರೆ ಭೂಮಿ ಕ್ಷೇತ್ರಕ್ಕೆ ಸೇರಿರುವುದರಿಂದ ಹಳೆಯ ಹಾಗೂ ಹೊಸ ಅಮ್ಮನಘಟ್ಟಗಳನ್ನು ಸಂಪರ್ಕಿಸುವ ರೋಪ್ ವೇ ನಿರ್ಮಾಣ ಹಾಗೂ ಯಾತ್ರಿನಿವಾಸ ನಿರ್ಮಾಣ ಮಾಡುವ ಯೋಜನೆಗಳನ್ನು ಸರ್ಕಾರ ಚರ್ಚೆಯಲ್ಲಿಟ್ಟಿದೆ ಎಂದರು. ಇದೇ ವೇಳೆ ಕ್ಷೇತ್ರಕ್ಕೆ ಕೋಟೆಕಾನು, ಜೇನಿ ಹಾಗೂ ಮಾವಿನಹೊಳೆ ರಸ್ತೆ ಸಂಪರ್ಕ ಕಲ್ಪಿಸುವ ಭರವಸೆ ನೀಡಿದರು.
ಭಾರತೀಯ ಜನತಾ ಪಕ್ಷದ ಆಡಳಿತಾವಧಿಯಲ್ಲಿ ಯಾವುದೇ ಅನುದಾನ ನೀಡಲಾಗಿಲ್ಲ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವೇ ₹1 ಕೋಟಿ ಅನುದಾನ ಬಿಡುಗಡೆ ಸಾಧ್ಯವಾಗಿದೆ ಎಂದು ಸ್ಪಷ್ಟಪಡಿಸಿದರು. ಶೀಘ್ರದಲ್ಲೇ ಪ್ರವಾಸೋದ್ಯಮ ಇಲಾಖೆ ಜೊತೆಗೂಡಿ ಅಭಿವೃದ್ದಿ ಪರ ನೀಲಿನಕಾಶೆ ರೂಪಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಶ್ರೀ ದೇವಿಯ ಜಾತ್ರಾ ಮಹೋತ್ಸವದ ವಿಶೇಷ ಸಂಚಿಕೆಯನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಬಿಡುಗಡೆ ಮಾಡಿದರು.
ಈ ವೇಳೆ ಮಾಜಿ ಶಾಸಕ ಜಿ.ಡಿ. ನಾರಾಯಣಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಹಾಗು ದೇವಸ್ಥಾನದ ಕಾರ್ಯಾಧ್ಯಕ್ಷ ಕಲಗೋಡು ರತ್ನಾಕರ, ಜಿ.ಪಂ. ಮಾಜಿ ಸದಸ್ಯರಾದ ಬಂಡಿ ರಾಮಚಂದ್ರ, ಶ್ವೇತಾ ಬಂಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ, ಬ್ಕಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ತಾ.ಪಂ. ಮಾಜಿ ಸದಸ್ಯ ಎರಗಿ ಉಮೇಶ್, ಗೌರಮ್ಮ, ಮುಂಬಾರು ಗ್ರಾ.ಪಂ. ಅಧ್ಯಕ್ಷ ಕುಮಾರ್, ಕೋಡೂರು ಗ್ರಾ.ಪಂ. ಅಧ್ಯಕ್ಷ ಜಯಪ್ರಕಾಶ್, ಮಾರುತಿಪುರ ಗ್ರಾ.ಪಂ. ಅಧ್ಯಕ್ಷೆ ಜಯಮ್ಮ, ಚಿಕ್ಕಜೇನಿ ಗ್ರಾ.ಪಂ. ಸದಸ್ಯ ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.