ಹೆದ್ದಾರಿಪುರ ಗ್ರಾಪಂ ನಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪ : ಉನ್ನತ ಮಟ್ಟದ ತನಿಖೆಗೆ ಗ್ರಾಮಸ್ಥರ ಒತ್ತಾಯ
ರಿಪ್ಪನ್ ಪೇಟೆ : ಹೆದ್ದಾರಿಪುರ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ, ಕೆಲವು ಸದಸ್ಯರು ಪಿಡಿಓ ವಿರುದ್ದ ಜಿಪಂ ಸಿಇಒಗೆ ದೂರು ಸಲ್ಲಿಸಿದ ಘಟನೆ ಸೋಮವಾರ ನಡೆದ 15ನೇ ಹಣಕಾಸು ಯೋಜನೆಯ ಕಾಮಗಾರಿಗಳ ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಭಾರಿ ಚರ್ಚೆಗೆ ಕಾರಣವಾಯಿತು.
ಸೋಮವಾರ ನಡೆದ ಎಂಜಿಎನ್‌ಆರ್‌ಇಜಿಎ ಹಾಗೂ 15ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಸಭೆಯಲ್ಲಿ ಗ್ರಾಮ ಪಂಚಾಯಿತಿಯ ಕಾಮಗಾರಿಗಳ ಪಾರದರ್ಶಕತೆ ಕುರಿತಂತೆ ತೀವ್ರ ಚರ್ಚೆ ನಡೆಯಿತು. ರಸ್ತೆ, ಬಾಕ್ಸ್ ಚರಂಡಿ, ಪೈಪ್ ಅಳವಡಿಕೆ, ತೆರೆದ ಬಾವಿ ಕೈಪಿಡಿ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ಅವೈಜ್ಞಾನಿಕವಾಗಿ ನಡೆದಿದ್ದು, ಕೆಲವೆಡೆ ಕಾಮಗಾರಿ ನೆರವೇರದೆ ಬಿಲ್ ಪಾವತಿಸಲಾಗಿದೆ ಎಂದು ಸದಸ್ಯರು ಆರೋಪಿಸಿದರು.
ಇದೇ ವೇಳೆ ಪರಿಶಿಷ್ಟ ಜನಾಂಗ ಇಲ್ಲದ ಪ್ರದೇಶಗಳಲ್ಲಿ ಎಸ್‌ಸಿ ಮೀಸಲು ಅನುದಾನದ ದುರ್ಬಳಕೆ ನಡೆದಿದೆ ಎಂದು ಸದಸ್ಯರು ಪಿಡಿಓ ವಿರುದ್ಧ ಗಂಭೀರ ಆರೋಪ ಹೊರಿಸಿದರು. ಈ ಬಗ್ಗೆ ಎಂಟು ಸದಸ್ಯರು ಜಿಪಂ ಸಿಇಒಗೆ ದೂರು ಸಲ್ಲಿಸಿರುವುದಾಗಿ ಮಾದ್ಯಮಗಳಿಗೆ ಪ್ರತಿಯನ್ನು ಹಂಚಿದರು.ಇನ್ನೂ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರ ಗಮನಕ್ಕೆ ತಾರದೇ ಇಸ್ವತ್ತುಗಳನ್ನು ಪ್ರಭಾವಿ ವ್ಯಕ್ತಿಗಳಿಗೆ ವಿತರಿಸುವ ಮೂಲಕ ಶಿಷ್ಠಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯತ್ ನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸದಸ್ಯರೇ ಆರೋಪಿಸುತ್ತಿದ್ದಾರೆ , ಪಂಚಾಯತ್ ಬೋರ್ಡ್ ನಿರ್ಣಯವಿಲ್ಲದೇ ಯಾವುದೇ ಬಿಲ್ ಆಗುವುದಿಲ್ಲ ಆದರೂ ಸದಸ್ಯರೆಲ್ಲಾ ಪಿಡಿಒ ಮೇಲೆ ಆರೋಪ ಮಾಡುತ್ತಿರುವುದರಿಂದ ಕೂಡಲೇ ಉನ್ನತ ಮಟ್ಟದ ತನಿಖೆ ನಡೆಸುವಂತೆ ಗ್ರಾಮಸ್ಥರಾದ ಮಂಜಪ್ಪ ಯಡಗುಡ್ಡೆ, ಕಲ್ಲೂರು ಲೋಕಪ್ಪ ಗೌಡ, ಶಾಮಣ್ಣ ಹಾಗೂ ಭೀಮರಾವ್ ಆಗ್ರಹಿಸಿದ್ದಾರೆ.
ನೋಡಲ್ ಅಧಿಕಾರಿ ಎಂ. ರಂಗನಾಥ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ನಾಗರತ್ನ, ಪಿಡಿಒ ರಾಘವೇಂದ್ರ ಸೇರಿದಂತೆ ಸದಸ್ಯರು ಹಾಜರಿದ್ದರು.