Headlines

ರಿಪ್ಪನ್ ಪೇಟೆ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಪೊಲೀಸ್ ಠಾಣೆಗೆ ಆಗಮಿಸಿದ ವಿಘ್ನ ನಿವಾರಕ

ರಿಪ್ಪನ್ ಪೇಟೆ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಪೊಲೀಸ್ ಠಾಣೆಗೆ ಆಗಮಿಸಿದ ವಿಘ್ನ ನಿವಾರಕ

ರಿಪ್ಪನ್ ಪೇಟೆ : ಪಟ್ಟಣದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಆವರಣದಲ್ಲಿ ಗಣಪತಿ ಬಪ್ಪನ ಪ್ರತಿಷ್ಠಾಪನೆ ನೆರವೇರಿದೆ. ಪಿಎಸ್‌ಐ ರಾಜುರೆಡ್ಡಿ ಅವರ ನೇತೃತ್ವದಲ್ಲಿ ಬುಧವಾರ (ಗಣೇಶ ಚತುರ್ಥಿ) ದಿನ ಮೆರವಣಿಗೆಯ ಮೂಲಕ ಗಣಪತಿಯನ್ನು ಠಾಣೆಗೆ ತಂದು ಪ್ರತಿಷ್ಠಾಪಿಸಲಾಯಿತು.

ಈ ದೃಶ್ಯ ಸ್ಥಳೀಯರಲ್ಲಿ ಭಾರಿ ಕುತೂಹಲ ಹುಟ್ಟಿಸಿತು. ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಲ್ಲಿ, ಸಂಘಟನೆಗಳ ವತಿಯಿಂದ ಅಥವಾ ಮನೆಗಳಲ್ಲಿ ಮಾತ್ರ ಗಣಪತಿ ಹಬ್ಬದ ಪ್ರತಿಷ್ಠಾಪನೆ ನಡೆಯುತ್ತಿದ್ದರೆ, ಈ ಬಾರಿ ಪೊಲೀಸ್ ಠಾಣೆಯ ಆವರಣವೇ ಹಬ್ಬದ ವೇದಿಕೆ ಆಗಿರುವುದು ವಿಶೇಷ.

ಹಿಂದೆ ಒಂದು ವಿಚಿತ್ರ ಘಟನೆ ನಡೆದಿತ್ತು. ಸುಮಾರು ಎರಡು ದಶಕಗಳ ಹಿಂದೆ, ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಮಿತಿಗೆ ಪರ್ಯಾಯವಾಗಿ ಇನ್ನೊಂದು ಸಾರ್ವಜನಿಕ ಗಣಪತಿ ಸಮಿತಿಯೊಂದು ಹುಟ್ಟಿಕೊಂಡಿತ್ತು ಇದರಿಂದ ಪಟ್ಟಣದ ವಾತಾವರಣ ಗೊಂದಲಮಯವಾಗಿತ್ತು. ಆ ಸಂದರ್ಭದಲ್ಲಿ, ಅಜ್ಞಾತರು ರಾತ್ರೋರಾತ್ರಿ ಪೊಲೀಸ್ ಠಾಣೆಯೊಳಗೆ ಗಣಪತಿ ಮೂರ್ತಿ ಇಟ್ಟುಹೋದರು. ಆಗ ಕರ್ತವ್ಯದಲ್ಲಿದ್ದ ಪಿಎಸ್‌ಐ ಆನಂದ್ ಅವರು ಆ ಮೂರ್ತಿಯನ್ನು “ಅರೆಸ್ಟ್” ಮಾಡಿ, ತಮ್ಮ ಮನೆಯಲ್ಲಿ ಪ್ರತಿಷ್ಠಾಪಿಸಿ ವರ್ಷಗಳವರೆಗೆ ಭಕ್ತಿಭಾವದಿಂದ ಪೂಜಿಸುತ್ತಾ ಬಂದಿದ್ದರು. ಆ ಘಟನೆ ಪಟ್ಟಣದ ಜನರ ನೆನಪಿನಲ್ಲಿ ಇಂದಿಗೂ ಉಳಿದಿದೆ.

ಈ ಬಾರಿ ಹೊಸದಾಗಿ ಠಾಣೆಗೆ ವರ್ಗಾವಣೆಯಾಗಿ ಬಂದಿರುವ ಪಿಎಸ್‌ಐ ರಾಜುರೆಡ್ಡಿ ಅವರು ಸ್ವತಃ ಮುಂದಾಗಿಯೇ ಮೆರವಣಿಗೆಯ ಮೂಲಕ ಗಣಪತಿಯನ್ನು ಠಾಣೆಗೆ ಕರೆತಂದು ಅಧಿಕೃತವಾಗಿ ಪ್ರತಿಷ್ಠಾಪನೆ ಮಾಡಿರುವುದು ಪಟ್ಟಣದ ಜನರಿಗೆ ಹೊಸ ಅನುಭವ ನೀಡಿದೆ.

ಸ್ಥಳೀಯರು ಇದನ್ನು ಸ್ವಾಗತಿಸಿದ್ದು, “ಠಾಣೆಯಲ್ಲೇ ಗಣಪತಿ ಬಪ್ಪನ ಪ್ರತಿಷ್ಠಾಪನೆಯಾದ್ದರಿಂದ ಎಲ್ಲರಿಗೂ ಶಾಂತಿ, ಸುಖ-ಸಮೃದ್ಧಿ ಸಿಗಲಿ” ಎಂಬ ಭಾವನೆ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಠಾಣೆ ಗಣಪತಿ ವಿಸರ್ಜನಾ ಮೆರವಣಿಗೆ – ಕುಣಿದು ಕುಪ್ಪಳಿಸಿದ ಸಿಬ್ಬಂದಿಗಳು

ರಿಪ್ಪನ್ ಪೇಟೆ : ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಬಾರಿ ನಡೆದ ಗಣಪತಿ ಪ್ರತಿಷ್ಠಾಪನೆಯಿಂದ ಹಿಡಿದು ವಿಸರ್ಜನೆಯವರೆಗೂ ಠಾಣೆಯ ವಾತಾವರಣವೇ ಭಕ್ತಿಯಿಂದ ತೇಲಾಡಿತು.

ಬುಧವಾರ ಸಂಜೆ ನಡೆದ ವಿಸರ್ಜನಾ ಮೆರವಣಿಗೆಯಲ್ಲಿ, ಸಾಮಾನ್ಯವಾಗಿ ಗಂಭೀರವಾಗಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಯೇ ಈ ಬಾರಿ ನಗು, ನೃತ್ಯದೊಂದಿಗೆ ಜನರ ಗಮನ ಸೆಳೆದರು. ಡೊಳ್ಳು-ತಾಳ ಸದ್ದಿನಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ನಾಗರಿಕರ ಜೊತೆ ಬೆರೆತು ಕುಣಿದು ಕುಪ್ಪಳಿಸಿದರು.

ಮೆರವಣಿಗೆ ಠಾಣೆಯಿಂದ ಆರಂಭವಾಗಿ ಪಟ್ಟಣದ ವಿನಾಯಕ ವೃತ್ತದ ಮೂಲಕ ಸಾಗರ ರಸ್ತೆಯಲ್ಲಿ ಸಾಗಿದ್ದು, ಎಲ್ಲೆಡೆ ಭಕ್ತರ ಘೋಷಣೆಗಳು ಮೊಳಗಿದವು. “ಗಣಪತಿ ಬಪ್ಪಾ ಮೋರಿಯಾ” ಎಂಬ ಕೂಗಾಟಕ್ಕೆ ತಕ್ಕಂತೆ ಸಿಬ್ಬಂದಿಯ ನೃತ್ಯ ಸಂಭ್ರಮ ಸ್ಥಳೀಯರ ಮೆಚ್ಚುಗೆಗೆ ಕಾರಣವಾಯಿತು.

ಸ್ಥಳೀಯ ನಾಗರಿಕರು ತಮ್ಮ ಪ್ರತಿಕ್ರಿಯೆಯಲ್ಲಿ, “ಠಾಣೆಯಲ್ಲೇ ಗಣಪತಿ ಪ್ರತಿಷ್ಠಾಪನೆ ನಡೆದದ್ದು ಇತಿಹಾಸದಲ್ಲೇ ಮೊದಲ ಬಾರಿಗೆ. ಈಗ ವಿಸರ್ಜನೆಯಲ್ಲಿ ಸಿಬ್ಬಂದಿಯೇ ಇಷ್ಟು ಸಂತೋಷದಿಂದ ಭಾಗಿಯಾಗಿರುವುದು ನೋಡಿದಾಗ ನಮ್ಮಲ್ಲೂ ಒಗ್ಗಟ್ಟು, ಹಬ್ಬದ ಉತ್ಸಾಹ ಹೆಚ್ಚಾಗಿದೆ” ಎಂದು ಹೇಳಿದರು.

ಅಂತಿಮವಾಗಿ, ಭಕ್ತಿಭಾವದ ನಡುವೆ ಗಣಪತಿ ಮೂರ್ತಿಯನ್ನು ವಡಗೆರೆ ಕೆರೆಯಲ್ಲಿ ಜಲ ವಿಸರ್ಜನೆ ಮಾಡಲಾಯಿತು.