ಗಣಪತಿ ವಿಸರ್ಜನೆಗೆ ತೆರಳಿದ ಯುವಕ – ಆನೆ ಟ್ರಂಚ್‌ನಲ್ಲಿ ಶವವಾಗಿ ಪತ್ತೆ
ಶಿವಮೊಗ್ಗ : ಗಣಪತಿ ವಿಸರ್ಜನೆಗೆ ತೆರಳಿದ್ದ ಯುವಕನು ಆನೆ ಟ್ರಂಚ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿರಿಗೆರೆ ಅಂಚೆಯ ಆಡಿನಕೊಟ್ಟಿಗೆ ಗ್ರಾಮದಲ್ಲಿ ಶನಿವಾರ ಬೆಳಕಿಗೆ ಬಂದಿದೆ.
ಮೃತನನ್ನು ನಾಗರಾಜ್ (34) ಎಂದು ಗುರುತಿಸಲಾಗಿದೆ. ಮೂರು ದಿನಗಳ ಹಿಂದೆ ಗ್ರಾಮದಲ್ಲಿ ಗಣಪತಿ ಪ್ರತಿಷ್ಠಾಪನೆ ನಡೆದಿದ್ದು, ನಿನ್ನೆ ವಿಸರ್ಜನೆ ನೆರವೇರಿಸಲಾಯಿತು. ಈ ವೇಳೆ ಟ್ರಂಚ್ ಬಳಿ ಕಾಲು ಜಾರಿ ಬಿದ್ದು ದುರ್ಘಟನೆ ಸಂಭವಿಸಿದ್ದೆಂಬ ಶಂಕೆ ವ್ಯಕ್ತವಾಗಿದೆ. ಮಳೆಯ ನೀರು ತುಂಬಿಕೊಂಡಿದ್ದರಿಂದ ಮೃತದೇಹ ಪತ್ತೆಯಾಗಿರಲಿಲ್ಲ. ಇಂದು ಟ್ರಂಚ್‌ನ ದಂಡೆ ಹೊಡೆದು ನೀರು ಖಾಲಿ ಮಾಡಿದಾಗ ಶವ ಪತ್ತೆಯಾಯಿತು.
ಗ್ರಾಮಸ್ಥರು ಆನೆ ಟ್ರಂಚ್‌ಗಳನ್ನು ಅವೈಜ್ಞಾನಿಕವಾಗಿ ನಿರ್ಮಿಸಿರುವುದೇ ಈ ದುರಂತಕ್ಕೆ ಕಾರಣವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವು ಬಾರಿ ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.