ರೈತರ ಮೇಲೆ ಹಲ್ಲೆ ಮಾಡಿದ ಅಧಿಕಾರಿ ವಿರುದ್ದ ಕಟ್ಟುನಿಟ್ಟಿನ ಕ್ರಮ : ಗೋಪಾಲಕೃಷ್ಣ ಬೇಳೂರು
ರೈತರ ಮೇಲೆ ಹಲ್ಲೆ ಮಾಡಿದ ಅಧಿಕಾರಿ ವಿರುದ್ದ ಕಟ್ಟುನಿಟ್ಟಿನ ಕ್ರಮ : ಗೋಪಾಲಕೃಷ್ಣ ಬೇಳೂರು
ಸಾಗರ : ಕಾನೂನು ವ್ಯವಸ್ಥೆ ಹಾಳುಮಾಡುವವರು ಯಾರೇ ಆದರೂ ಕ್ರಮ ತೆಗೆದುಕೊಳ್ಳಿ. ನಮ್ಮ ಪಕ್ಷದವರೇ ಆಗಲೀ, ಯಾವುದೇ ಪಕ್ಷದವರಾದರೂ ಅಂತಹವರ ಬಗ್ಗೆ ಕರುಣೆ ಬೇಡ. ಯಾವುದೇ ಇಲಾಖೆಯವರು ವಿನಾ ಕಾರಣ ರೈತರ ಮೇಲೆ ಹಲ್ಲೆ ಮಾಡಿದರೆ ಸಹಿಸಿಕೊಂಡಿರುವುದಿಲ್ಲ. ರೈತರ ಮೇಲೆ ಹಲ್ಲೆ ಮಾಡಿದ ಅಧಿಕಾರಿ ವಿರುದ್ದ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಎಚ್ಚರಿಕೆ ನೀಡಿದ್ದಾರೆ.
ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಅರಣ್ಯ ಇಲಾಖೆ ನಡೆಸಿದ ದೌರ್ಜನ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ಮಂಜುನಾಥ್ ಆರೋಗ್ಯ ವಿಚಾರಿಸಿ, ಪ್ರವಾಸಿ ಮಂದಿರದಲ್ಲಿ ಅರಣ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಒಂದೊಮ್ಮೆ ಬೇಟೆ ಇನ್ನಿತರೆ ಚಟುವಟಿಕೆಯಲ್ಲಿ ತೊಡಗಿದ್ದರೆ ಅವರ ಮೇಲೆ ಕೇಸ್ ಹಾಕಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸರಿಗೆ ಒಪ್ಪಿಸಿ. ನಿಮಗೆ ಹೊಡೆಯುವ ಅಧಿಕಾರ ಇಲ್ಲ. ತುಮರಿಯ ಮಂಜುನಾಥ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ವೈದ್ಯಕೀಯ ವರದಿಯಲ್ಲಿ ಕಂಡು ಬಂದಿದೆ. ಪಕ್ಕೆಲುಬು ಮುರಿದು ಉಸಿರಾಟಕ್ಕೆ ತೊಂದರೆಯಾಗಿದೆ. ಮಂಜುನಾಥ್ ಅವರ ಮೇಲೆ ಹಲ್ಲೆಗೆ ಸಂಬಂಧಿಸಿದಂತೆ ಮತ್ತೊಂದು ಸುತ್ತಿನ ವರದಿ ನೀಡಲು ವೈದ್ಯರಿಗೆ ತಿಳಿಸಿದ್ದೇನೆ. ವರದಿ ಬಂದ ನಂತರ ದೌರ್ಜನ್ಯ ನಡೆಸಿದ ಅರಣ್ಯ ಅಧಿಕಾರಿಗಳ ವಿರುದ್ದ ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ನಿಮ್ಮ ವರ್ತನೆ ಬಗ್ಗೆ ಅರಣ್ಯ ಸಚಿವರಿಗೆ ಸಹ ತಿಳಿಸುತ್ತೇನೆ ಎಂದು ಹೇಳಿದರು.
ತಾಲ್ಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಬದ್ದವಾಗಿರಬೇಕು. ಈಚೆಗೆ ವಿಜಯನಗರ ಬಡಾವಣೆಯಲ್ಲಿ ಸದಾನಂದ ಎಂಬುವವರ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಬಿಟ್ಟು ಕಳಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಆರೋಪಿಗಳನ್ನು ಬಿಟ್ಟು ಕಳಿಸಿದ್ದು ಏಕೆ ಎಂದು ಪ್ರಶ್ನಿಸಿದ ಶಾಸಕರು ಠಾಣಾ ಜಾಮೀನಿನಲ್ಲಿ ಬಿಡುಗಡೆ ಮಾಡಿದ ಪೊಲೀಸ್ ಅಧಿಕಾರಿ ವಿರುದ್ದ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಡಿವೈಎಸ್‍ಪಿಗೆ ಸೂಚನೆ ನೀಡಿದರು.
ತಾಲ್ಲೂಕಿನಲ್ಲಿ ಕೊಲೆ ಸುಲಿಗೆ, ಇಸ್ಪೀಟ್, ಓಸಿ ಇನ್ನಿತರೆ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗಿರುವವರನ್ನು ರೌಡಿಪಟ್ಟಿಗೆ ಸೇರಿಸಿ, ನಮ್ಮ ಪಕ್ಷದವರೇ ಆಗಲೀ, ಯಾವುದೇ ಪಕ್ಷದವರಾದರೂ ಅಂತಹವರ ಬಗ್ಗೆ ಕರುಣೆ ಬೇಡ. . ಕಾನೂನು ವ್ಯವಸ್ಥೆ ಹಾಳಾಗಿದೆ ಎಂದು ವಿಪಕ್ಷದವರು, ಸಾರ್ವಜನಿಕರು ನನ್ನ ಕಡೆ ಬೆರಳು ತೋರಿಸಬಾರದು. ಸಾಗರ ನಗರ ಠಾಣೆ ಮತ್ತು ತುಮರಿಯಲ್ಲಿ ಪೊಲೀಸ್ ಠಾಣೆ ಮಾಡಲು ಜಾಗ ಗುರುತಿಸಲಾಗುತ್ತಿದೆ. ಸದ್ಯದಲ್ಲಿಯೆ ಕಾಮಗಾರಿ ಪ್ರಾರಂಭಿಸಲು ಅಗತ್ಯ ಗಮನ ಹರಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಪ್ರಮುಖರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಸೋಮಶೇಖರ ಲ್ಯಾವಿಗೆರೆ, ಗಣಪತಿ ಮಂಡಗಳಲೆ, ಜಿ.ಟಿ.ಸತ್ಯನಾರಾಯಣ ಇನ್ನಿತರರು ಹಾಜರಿದ್ದರು.
