ಚಿನ್ನಾಭರಣಕ್ಕಾಗಿ ಕೆಲಸ ಕೊಟ್ಟ ಮೇಸ್ತ್ರಿಯ ಕೊಲೆ – ಉಂಗುರ ತೆಗೆಯಲಾಗದೇ ಬೆರಳನ್ನೇ ಕಟ್ ಮಾಡಿದ ಹಂತಕರು
ಹಾಸನ: ಚಿನ್ನಾಭರಣಕ್ಕಾಗಿ ಕೆಲಸ ಕೊಟ್ಟ ಮೇಸ್ತ್ರಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಅರಸೀಕೆರೆ ನಗರದಲ್ಲಿ ನಡೆದಿದೆ. ವಿಜಯ್ ಕುಮಾರ್ (46) ಕೊಲೆಯಾದ ಮೇಸ್ತ್ರಿ. ಶುಕ್ರವಾರ ತಡರಾತ್ರಿ ಇಬ್ಬರು ಬಿಹಾರ ಮೂಲದ ಕಾರ್ಮಿಕರು ಕೊಲೆ ಮಾಡಿದ್ದಾರೆ ಎಂದು ಈಟಿವಿ ಭಾರತಕ್ಕೆ ಪೊಲೀಸ್ ಮೂಲಗಳು ತಿಳಿಸಿವೆ.
ಅರಸೀಕೆರೆ ಕೆಎಸ್ಆರ್ಟಿಸಿ ಡಿಪೋ ಸಮೀಪ ಇರುವ ಪೆಟ್ರೋಲ್ ಬಂಕ್ ಮುಂಭಾಗ ಒಂದು ಕಟ್ಟಡ ನಿರ್ಮಾಣವಾಗುತ್ತಿದ್ದು, ಕಟ್ಟಡ ನಿರ್ಮಾಣ ಜವಾಬ್ದಾರಿಯನ್ನು ವಿಜಯ್ ಕುಮಾರ್ ಅವರು ವಹಿಸಿಕೊಂಡಿದ್ದರು. ಶುಕ್ರವಾರ ತಡರಾತ್ರಿ ವಿಜಯ್ ಕುಮಾರ್ಗೆ ಕಟ್ಟಡದಲ್ಲಿ ಗಲಾಟೆ ನಡೆದಿದೆ ಬೇಗ ಬನ್ನಿ ಎಂದು ಫೋನ್ ಕರೆ ಬಂದಿತ್ತು. ತಮ್ಮ ಬೈಕ್ನಲ್ಲಿ ಕಟ್ಟಡದ ಬಳಿ ಹೋಗಿ ನೋಡಿದಾಗ ಯಾವುದೇ ಗಲಾಟೆಯಾಗಿರಲಿಲ್ಲ.
ಈ ಬಗ್ಗೆ ಕಾರ್ಮಿಕರನ್ನು ಪ್ರಶ್ನಿಸುತ್ತಿದ್ದ ವೇಳೆ ಹಿಂಬದಿಯಲ್ಲಿದ್ದ ಓರ್ವ ಆರೋಪಿ, ವಿಜಯ್ ಕುಮಾರ್ ತಲೆಗೆ ಮತ್ತು ಕುತ್ತಿಗೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ನಂತರ ಮತ್ತೊಬ್ಬ ಆರೋಪಿ ಮಾರಕಾಸ್ತ್ರಗಳಿಂದ ವಿಜಯ್ ಕುಮಾರ್ ಮೇಲೆ ದಾಳಿ ಮಾಡಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ವಿಜಯ್ ಕುಮಾರ್, ತಾನು ನಿರ್ಮಾಣ ಮಾಡುತ್ತಿದ್ದ ಕಟ್ಟಡದಲ್ಲಿಯೇ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಕೊಲೆ ಬಳಿಕ ಮೈಮೇಲಿದ್ದ ಕೆಲ ಬಂಗಾರದ ಒಡವೆಗಳನ್ನು ದೋಚಿದ ಆರೋಪಿಗಳು, ವಿಜಯ್ ಕುಮಾರ್ ಅವರ ಬೆರಳಿನಲ್ಲಿದ್ದ ಉಂಗುರ ತೆಗೆಯುವುದಕ್ಕೆ ಬರಲಿಲ್ಲವೆಂದು ಉಂಗುರವಿದ್ದ ಬಲಗೈನ ಮಧ್ಯದ ಬೆರಳನ್ನೇ ಕಟ್ ಮಾಡಿ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಜಯ್ ಕುಮಾರ್ ಮೈಮೇಲಿದ್ದ ಒಂದು ಚಿನ್ನದ ಸರ, ಮೂರು ಉಂಗುರ ಮತ್ತು ದುಬಾರಿ ಮೊಬೈಲ್ ಫೋನ್ ದೋಚಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಮೃತನ ಕುಟುಂಬಸ್ಥರು ಉಲ್ಲೇಖಿಸಿದ್ದಾರೆ.